‘ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಚುನಾವಣೆ ಮುಗಿದ ಮೇಲೆ ಉತ್ತರ ಕೊಡ್ತೀನಿ’

ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಚುನಾವಣೆ ಮುಗಿದ್ಮೇಲೆ ಉತ್ತರ ಕೊಡ್ತೀನಿ ಅಂತಾ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ಲಿಂಗಾಯತರ ಮೇಲೆ ನಡೆಯುವ ಚುನಾವಣೆಯಲ್ಲ. ದೇಶದ ಆಡಳಿತ ವೈಫಲ್ಯದ ವಿರುದ್ಧ ನಡೆಯುವ ಚುನಾವಣೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಮ್ಮ ಅಸ್ಮಿತೆ. ವೈಚಾರಿಕ ಭಿನ್ನತೆಗಳನ್ನ ನಾವು ಬಗೆಹರಿಸಿಕೊಳ್ಳುತ್ತೇವೆ. ಲಿಂಗಾಯತ ಧರ್ಮದ ವಿಚಾರ ಕಾಂಗ್ರೆಸ್​ಗೆ ಸಂಬಂಧವಿಲ್ಲ. ಲಿಂಗಾಯತ ಧರ್ಮದ ಬಗ್ಗೆ ನಾನು ಈಗ ಮಾತನಾಡಲ್ಲ. ಚುನಾವಣೆ ನಂತರ ಬನ್ನಿ ನಾನು ಉತ್ತರ ಕೊಡ್ತೀನಿ ಅಂತಾ ಮಾಧ್ಯಮಗಳಿಗೆ ಹೇಳಿದರು.

ವಿಜಯಪುರದಲ್ಲಿ ಬಿಜೆಪಿ ಶಾಸಕ ಎ.ಎಸ್. ಪಾಟೀಲ್​​ ನಡಹಳ್ಳಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆಗೆ ಯತ್ನ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಡಹಳ್ಳಿ ಎಲುಬಿಲ್ಲದ ನಾಲಿಗೆ ತರ ಮಾತಾಡ್ತಾರೆ. ಇವರ ಇತಿಹಾಸ ವಿಜಯಪುರದಲ್ಲಿ ಎಲ್ಲರಿಗೂ ಗೊತ್ತಿದೆ. ಅರೇ ಹುಚ್ಚನ ತರ ಮಾತಾಡಿದರೆ ಹೀಗೆ ಆಗುತ್ತದೆ. ನಡಹಳ್ಳಿ ಮೇಲೆ  ನಡೆದ ದಾಳಿಯಲ್ಲಿ ನನ್ನ ಬೆಂಬಲಿಗರು ಇಲ್ಲ ಅಂತಾ ನಾನು ಹೇಳಲ್ಲ, ಆದ್ರೆ ನನಗೂ ಅದಕ್ಕೂ ಸಂಬಂಧವಿಲ್ಲ. ನಡಹಳ್ಳಿ ಸಾರಾಯಿ ಕುಡಿದವರ ಹಾಗೆ ವರ್ತಿಸುತ್ತಿದ್ದಾರೆ. ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದೇನೆ, ಘಟನೆ ಬಗ್ಗೆ ಕಾನೂನು ಪ್ರಕಾರ ಕ್ರಮ ಆಗುತ್ತದೆ ಎಂದರು.