ಬ್ಯಾನ್ ಪ್ರಶ್ನಿಸಿ ಮಾಯಾವತಿ ಮೊರೆ, ಆಯೋಗದ ಕ್ರಮ ತೃಪ್ತಿ ತಂದಿದೆ ಅಂದ ಸುಪ್ರೀಂ ಕೋರ್ಟ್..!

ನವದೆಹಲಿ: 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ತನ್ನ ಮೇಲೆ ಚುನಾವಣಾ ಆಯೋಗ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿದೆ. ನಮ್ಮ ಆದೇಶಗಳಿಂದ ಚುನಾವಣಾ ಆಯೋಗಕ್ಕೆ ಈಗಲಾದರೂ ಎಚ್ಚರವಾದಂತಿದೆ. ಹಲವಾರು ರಾಜಕಾರಣಿಗಳನ್ನ ಇಂತಿಷ್ಟು ಸಮಯದವರೆಗೆ ಪ್ರಚಾರ ನಡೆಸದಂತೆ ಬ್ಯಾನ್ ಮಾಡಿದೆ. ಇದರಿಂದ ಈಗ ಯಾವುದೇ ಹೆಚ್ಚಿನ ಆದೇಶಗಳ ಅಗತ್ಯವಿಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯಿ ಹೇಳಿದ್ದಾರೆ.

ಇತ್ತೀಚೆಗೆ ಮಾಯಾವತಿ ದಿಯೋಬಂದ್​​ನಲ್ಲಿ ಪ್ರಚಾರ ನಡೆಸುವ ವೇಳೆ, ನಮ್ಮ ಪಕ್ಷ ಹಾಗೂ ಕಾಂಗ್ರೆಸ್​ ನಡುವೆ ಮತಗಳನ್ನ ಡಿವೈಡ್​ ಮಾಡಬೇಡಿ ಎಂದು ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದರು. ನೀತಿ ಸಂಹಿತೆಯ ಪ್ರಕಾರ ಮತಗಳನ್ನ ಸೆಳೆಯಲು ಯಾವುದೇ ಜಾತಿ ಅಥವಾ ಸಮುದಾಯದ ಭಾವನೆಯನ್ನ ಬಳಸಿಕೊಳ್ಳುವಂತಿಲ್ಲ. ಹೀಗಾಗಿ ಚುನಾವಣಾ ಆಯೋಗ ಮಾಯಾವತಿ 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ನಿರ್ಬಂಧ ಹೇರಿದೆ.

ಇನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ತಮ್ಮ ಪ್ರಚಾರದ ವೇಳೆ ಮಾಯಾವತಿಗೆ ತಿರುಗೇಟು ಕೊಟ್ಟು, ಕಾಂಗ್ರೆಸ್​​, ಎಸ್​​ಪಿ ಹಾಗೂ ಪಿಎಸ್​​ಪಿಗೆ ಅಲಿಯಲ್ಲಿ ನಂಬಿಕೆ ಇದ್ದರೆ ನಮಗೆ ಭಜರಂಗಬಲಿಯಲ್ಲಿ ನಂಬಿಕೆ ಇದೆ ಎಂದು ಹೇಳಿದ್ದರು. ಹೀಗಾಗಿ ಅವರು ಕೂಡ 72 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಬ್ಯಾನ್ ಮಾಡಲಾಗಿದೆ.

ಹಾಗೇ ಬಿಜೆಪಿ ಅಭ್ಯರ್ಥಿ ಜಯಪ್ರದಾ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ ಅಜಂ ಖಾನ್​​ಗೂ ಕೂಡ 3 ದಿನಗಳವರೆಗೆ ಪ್ರಚಾರ ನಡೆಸದಂತೆ ನಿಷೇಧ ಹೇರಲಾಗಿದೆ. ಇನ್ನು ಕೇಂದ್ರ ಸಚಿವೆ ಮನೇಕಾ ಗಾಂಧಿ ಕೂಡ ಧಾರ್ಮಿಕ ಹೇಳಿಕೆಯ ಹಿನ್ನೆಲೆ 48 ಗಂಟೆಗಳ ಪ್ರಚಾರ ನಿಷೇಧಕ್ಕೆ ಗುರಿಯಾಗಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv