ರೌಡಿ ರಂಗ.. ರಂಗನಾಗಿ ಬದಲಾಗಿದ್ಹೇಗೆ?: ನೆನಪು ಬಿಚ್ಚಿಟ್ಟು ಕಣ್ಣೀರಿಟ್ಟ ಮಾವುತ

ಅವನು ಮತ್ತಿಗೋಡಿಗೆ ಬಂದ ಮೇಲೆ ಒಬ್ಬರಿಗೂ ತೊಂದರೆ ಕೊಟ್ಟವನಲ್ಲ ಸರ್.. ಮಕ್ಕಳು, ದೊಡ್ಡವರು ಯಾರೇ ಹೋದ್ರೂ ಏನೂ ಮಾಡುತ್ತಿರಲಿಲ್ಲ. ಆದ್ರೆ ರಾತ್ರಿ ಮೇಯೋಕೆ ಹೋಗ್ತಿದ್ದವನು ಬಸ್ ಆಕ್ಸಿಡೆಂಟ್ ಆಗಿ ಸತ್ತೋಗ್ಬಿಟ್ಟ. ನೋವು ಹೇಳಿಕೊಳ್ಳೋದಕ್ಕೆ ಆಗ್ತಿಲ್ಲ ಸರ್..
ಇದು ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ರಸ್ತೆ ದಾಟುವಾಗ ಮೃತಪಟ್ಟ ಆನೆ ರೌಡಿ ರಂಗ ಅಲಿಯಾಸ್ ರಂಗನ ಆರೈಕೆ ಮಾಡುತ್ತಿದ್ದ ಮಾವುತ ಅಹಮ್ಮದ್ ಷರೀಫ್ ಅವರ ನೋವಿನ ನುಡಿ. ಸಂಜೆ ಆನೆಗೆ ಆಹಾರ ನೀಡಿ ಕ್ಯಾಂಪ್‍ನಲ್ಲಿ ಬಿಟ್ಟು ತಮ್ಮ ಮನೆಗೆ ಬಂದು ಷರೀಫ್ ನಿದ್ದೆಗೆ ಜಾರಿದ್ದರು. ಆದ್ರೆ ಬೆಳಗಿನ ಜಾವ ಶಿಬಿರದ ಸಿಬ್ಬಂದಿ ಇವರಿಗೆ ಫೋನ್ ಮಾಡಿ ಅಪಘಾತ ಆಗಿ ರಂಗ, ರಸ್ತೆ ಬದಿ ಒದ್ದಾಡುತ್ತಿದ್ದಾನೆ ಅಂತ ತಿಳಿಸಿದಾಗ ಷರೀಫ್ ತೀವ್ರ ಆಘಾತಕ್ಕೊಳಗಾಗಿದ್ದಾರೆ.
ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ ಆನೆಯ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ. ಒಂದೆಡೆ ತನ್ನ ಕೈತುತ್ತು ಉಣ್ಣುತ್ತಿದ್ದ ರಂಗ ಕಣ್ಣೆದುರೇ ನರಳುತ್ತಿದ್ದಾನೆ. ಬೆನ್ನಿನ ಭಾಗದಿಂದ ರಕ್ತ ಒಂದೇ ಸಮನೆ ಹರಿಯುತ್ತಿದೆ. ಆ ಕ್ಷಣದಲ್ಲಿ ಏನು ಮಾಡಬೇಕೆಂಬುದು ಅವರಿಗೆ ತೋಚಲಿಲ್ಲ. ದೈತ್ಯ ದೇಹದ ವೇದನೆಯನ್ನು ಮಾವುತ ತಡೆಯುವುದಾದರೂ ಹೇಗೆ? ನೋವನುಭವಿಸುತ್ತಿದ್ದ ರಂಗನ ವೇದನೆ ಕಂಡು ಅಲ್ಲಿದ್ದವರ ಮನಸ್ಸು ಕರಗಿತ್ತು. ಆದರೆ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ.
ಸ್ಥಳಕ್ಕೆ ಭೇಟಿ ನೀಡಿದ ಫಸ್ಟ್ ನ್ಯೂಸ್ ಜತೆ ಮಾತನಾಡಿದ ಮಾವುತ ಷರೀಫ್, ರಂಗನೊಂದಿಗಿನ ಒಡನಾಟವನ್ನು ನೆನೆದುಕೊಂಡು ಮರುಕಪಟ್ಟರು. 2006ರಿಂದ ಮತ್ತಿಗೋಡು ಕ್ಯಾಂಪ್‍ನಲ್ಲಿ ಮಾವುತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. 6 ತಿಂಗಳಿಂದ ರಂಗನ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ. ಯಾರೇ ಹತ್ತಿರ ಹೋದ್ರೂ ಏನೂ ಮಾಡುತ್ತಿರಲಿಲ್ಲ. ತನ್ನ ಪಾಡಿಗೆ ತಾನಿರುತ್ತಿದ್ದ. ಕ್ಯಾಂಪ್‍ನಲ್ಲಿ ಇರುವ ಎಲ್ಲಾ ಆನೆಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ. ಹೇಳಿಕೊಟ್ಟ ಕೆಲಸಗಳನ್ನೆಲ್ಲ ಚೆನ್ನಾಗಿ ಕಲಿಯುತ್ತಿದ್ದ. ಇಂಥ ಟೈಮಲ್ಲಿ ಹೀಗಾಗಿರೋದು ಬಹಳ ನೋವು ಕೊಟ್ಟಿದೆ. ಇಷ್ಟು ದಿನ ಜತೆಗಿದ್ದವನು ಇನ್ನಿಲ್ಲ ಅನ್ನೋದು ನೋವು ತರಿಸಿದೆ ಅಂತ ಮರುಕಪಟ್ಟರು.
ರಂಗನ ದಷ್ಟಪುಷ್ಟವಾದ ದೇಹ ಇಲ್ಲಿನ ಮಾವುತರೆಲ್ಲರಿಗೂ ಖುಷಿಕೊಟ್ಟಿತ್ತು. ಮುಂದೆ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಸೇರಿದಂತೆ ಕಠಿಣ ಕೆಲಸಗಳಿಗೆ ಆತನನ್ನು ಬಳಸಿಕೊಳ್ಳಬಹುದು ಅಂತ ಹಿರಿಯ ಅಧಿಕಾರಿಗಳು, ಅನುಭವಿ ಮಾವುತರು ಮಾತನಾಡಿಕೊಂಡಿದ್ದರು ಎಂದು ರಂಗನ ಭವಿಷ್ಯದ ಪ್ಲಾನ್ ಬಗ್ಗೆ ಹೇಳಿದ್ರು.
ರೌಡಿ ಬೇಡ ಅಂದು ರಂಗ ಅಂತ ಮಾತ್ರ ಇಟ್ಟಿದ್ವಿ…!
ಮೃತಪಟ್ಟ ರಂಗನ ಮೂಲ ಹೆಸರು ರೌಡಿ ರಂಗ ಅಂತಾ. ಬನ್ನೇರುಘಟ್ಟದಲ್ಲಿ ಆತನ ಪುಂಡಾಟ ಕಂಡು ಅವನಿಗೆ ರೌಡಿ ರಂಗ ಅಂತ ಹೆಸರಿಡಲಾಗಿತ್ತು. ಆದ್ರೆ ಇಲ್ಲಿಗೆ ಬಂದ ಮೇಲೆ ಆತನನ್ನ ಕ್ರಾಲ್‍ಗೆ ಹಾಕಿರಲಿಲ್ಲ. ಸೌಮ್ಯ ಸ್ವಭಾವ ಇದ್ದ ಕಾರಣ ರೌಡಿ ರಂಗ ಅನ್ನೋದನ್ನ ತೆಗೆದು ಕೇವಲ ರಂಗ ಅಂತ ಮಾತ್ರ ಇಟ್ಟಿದ್ವಿ ಅಂತಾರೆ ಷರೀಫ್.

ಅಭಿಮನ್ಯುವಿಗೆ ಹೆದರುತ್ತಿದ್ದ..!
ಸೌಮ್ಯ ಸ್ವಭಾವಕ್ಕೆ ಮನಃಪರಿವರ್ತನೆಯಾಗಿದ್ದ ರಂಗ ಮತ್ತಿಗೋಡು ಶಿಬಿರದ ಒಂದು ಆನೆಗೆ ಜಾಸ್ತಿ ಭಯಪಡ್ತಿದ್ದ. ಆತ ಹತ್ತಿರ ಬಂದ್ರೆ ಸಾಕು ಏನೂ ಅರಿಯದವನಂತೆ ನಿಂತುಬಿಡ್ತಿದ್ದನಂತೆ! ಆತ ಮತ್ಯಾರು ಅಲ್ಲ ಬಲಾಡ್ಯ ಅಭಿಮನ್ಯು..! ಎಸ್, ಅಭಿಮನ್ಯು ಅಂದ್ರೆ ರಂಗನಿಗೆ ಎಲ್ಲಿಲ್ಲದ ಭಯ. ಯಾಕಂದ್ರೆ ಬನ್ನೇರುಘಟ್ಟದಿಂದ ಕರೆ ತರುವ ಸಂದರ್ಭ ಅರ್ಜುನ ಮತ್ತು ಅಭಿಮನ್ಯುವನ್ನು ಬಳಸಲಾಗಿತ್ತು. ಹೀಗಾಗಿ ಆಗಿನ ಭಯ ಇನ್ನೂ ಬಿಟ್ಟಿರಲಿಲ್ಲ. ಇನ್ನು ಕ್ಯಾಂಪ್‍ಗೆ ಹೊಸದಾಗಿ ಯಾವುದಾದ್ರು ಆನೆ ಬಂದರೆ ಹೆಚ್ಚು ಭಯ ಪಡುತ್ತಿದ್ದ ರಂಗ ರೌಡಿತನ ಬಿಟ್ಟು ಹೇಗೆ ಬದಲಾಗಿದ್ದ ಎಂಬುದಕ್ಕೆ ಸಾಕ್ಷಿ.

ಪ್ರತಿದಿನ ಬೆಳಗ್ಗೆ 7 ಗಂಟೆಗೆ ಕಾಡಿನಿಂದ ಕರೆದುಕೊಂಡು ಬಂದು ಸ್ನಾನ ಮಾಡಿಸುತ್ತಿದ್ದೆ. ನಂತರ ಆಹಾರ ಕೊಟ್ಟು ಬಳಿಕ ಮರ ಎಳೆಯುವುದು, ಲಾರಿ ಹತ್ತುವ ತರಬೇತಿ ಕೊಡಿಸುತ್ತಿದ್ದೆ. ಈಗ ಆತ ಇಲ್ಲ, ಆ ನೋವಿನಿಂದ ಹೇಗೆ ಹೊರಗೆ ಬರೋದು ಗೊತ್ತಾಗುತ್ತಿಲ್ಲ. ಸ್ವಲ್ಪ ಸಮಯಾವಕಾಶಬೇಕು. ಬೇರೆ ಆನೆಯನ್ನು ಕೊಡುವವರೆಗೆ ನೋವು ಇದ್ದೇ ಇರುತ್ತೆ ಅಂತ ಮೆಲುದನಿಯಲ್ಲಿ ಮನಸ್ಸಿನ ನೋವನ್ನು ಷರೀಫ್ ಹೇಳಿಕೊಳ್ಳುವಾಗ ಕಣ್ಣುಗಳು ತೇವವಾಗಿದ್ದವು..!

ವಿಶೇಷ ವರದಿ: ಕಿಶೋರ್ ರೈ, ಕತ್ತಲೆಕಾಡು

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv