ಮದುವೆಗೆ ಬನ್ನಿ.. ವೋಟ್ ಮಾಡಿ ಇದಪ್ಪಾ ಜಾಗೃತಿ ಅಂದ್ರೆ

ಹಾವೇರಿ: ನೂರಕ್ಕೆ ನೂರರಷ್ಟು ಮತದಾನವಾಗಬೇಕೆಂಬ ಜಿಲ್ಲಾಡಳಿತದ ಆಶಯಕ್ಕೆ ಸಪ್ತಪದಿ ತುಳಿಯಲಿರುವ ನವಜೋಡಿ ಕೈ ಜೋಡಿಸಿದೆ. ಮದುವೆಯ ಸಮಾರಂಭವನ್ನು ಮತದಾರರ ಜಾಗೃತಿ ಸಮಾರಂಭವಾಗಿ ಪರಿವರ್ತಿಸುವ ವಿಶಿಷ್ಟ ಕಾರ್ಯಕ್ಕೆ ಹಾನಗಲ್ ತಾಲೂಕಿನ ಉಪ್ಪುಣಸಿ ನಿವಾಸಿ ಸಿದ್ದಪ್ಪ ಹಾಗೂ ಜ್ಯೋತಿ ಕುಟುಂಬಗಳು ‌ಮುಂದಾಗಿವೆ. ಭಾರತ ಚುನಾವಣಾ ಆಯೋಗ ಮತದಾರರಿಗೆ ನೀಡುವ ಗುರುತಿನ ಚೀಟಿಯ ಮಾದರಿಯಲ್ಲಿ ವಿವಾಹ ಲಗ್ನಪತ್ರಿಕೆಯನ್ನು ಮುದ್ರಿಸಿರುವ ಸಿದ್ದಪ್ಪ ಹಾಗೂ ಜ್ಯೋತಿ ಎಂಬ ನವಜೋಡಿ ಈ ಸಾಮಾಜಿಕ ಜಾಗೃತಿ ಕೈಗೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಮುಂದಾಗಿರುವುದು ಎಲ್ಲರ ಗಮನ ಸೆಳೆದಿದೆ.

ಸಿದ್ದಪ್ಪ ಗೋವಾ ರಾಜ್ಯದ ವಾಸ್ಕೋದಲ್ಲಿ ರೇಲ್ವೆ ಇಲಾಖೆಯ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಣೇಬೆನ್ನೂರು ತಾಲೂಕಿನ ಕುಸಗೂರ ನಿವಾಸಿ ವಧು ಜ್ಯೋತಿ ಎಂಬುವರೊಂದಿಗೆ ಏಪ್ರಿಲ್ 27 ರಂದು ಮದುವೆಯಾಗಲಿದ್ದಾರೆ.
ಮದುವೆ ಸಮಾರಂಭವನ್ನು ಮತಜಾಗೃತಿಗಾಗಿ ಬಳಸಿಕೊಳ್ಳುವ ಉದ್ದೇಶದಿಂದ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಬಳಿ ಮಾರ್ಗದರ್ಶನ ಪಡೆದಿದ್ದರು. ಈಗ ಇದು ಸಕ್ಸಸ್ ಆಗಿದೆ. ಮದುವೆಯ ಆಮಂತ್ರಣದ ಸಂಪೂರ್ಣ ಡಿಟೇಲ್ಸ್ ವೋಟರ್ ಐಡಿ ಕಾರ್ಡ್​ನಲ್ಲೇ ಮುದ್ರಿಸಲಾಗಿದೆ. ಕಾರ್ಡ್​ನ ಕೆಳಗಡೆ ಎಲ್ಲರಿಗೂ ಮದುವೆಯ ಆಮಂತ್ರಣ ಎನ್ನುವ ಬದಲು ಮದುವೆಗೆ ತಪ್ಪದೇ ಬನ್ನಿ, ಮತದಾನ ಕಡ್ಡಾಯವಾಗಿ ಮಾಡಿ ಎಂಬ ಜಾಗೃತಿ ಮೂಡಿಸುವ ಸಾಲುಗಳೂ ಇವೆ.

Leave a Reply

Your email address will not be published. Required fields are marked *