ಗೂಗಲ್​ ಅರ್ತ್​​ ಬಳಸಿ ಮದುವೆ ಪ್ರಪೋಸಲ್; ಯುವಕನಿಂದ ವಿಶ್ವದಾಖಲೆ

ಟೋಕಿಯೋ: ಐಸ್​ ಮೇಲೆ, ಕೃಷಿ ಭೂಮಿಯ ಮಧ್ಯೆ ದೊಡ್ಡದಾಗಿ ಮ್ಯಾರಿ ಮೀ ಎಂದು ಗರ್ಲ್​ಫ್ರೆಂಡ್​​ಗೆ ಪ್ರಪೋಸ್​ ಮಾಡಿರೋ ಸುದ್ದಿಗಳನ್ನ ನೋಡಿದ್ದೀರ. ಇಲ್ಲೊಬ್ಬ ವ್ಯಕ್ತಿ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ವಿಶಿಷ್ಟ ರೀತಿಯಲ್ಲಿ ಪ್ರಪೋಸ್​ ಮಾಡಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ಜಪಾನ್​​​ನ ಯಸೂಶಿ ಯಸ್ಸಾನ್​​ ಟಕಾಹಶಿ, ತನ್ನ ಗರ್ಲ್​​ಫ್ರೆಂಡ್ ನಾಟ್ಸುಕಿ​​ಗೆ ವಿಶಿಷ್ಟವಾಗಿ ಪ್ರಪೋಸ್​ ಮಾಡಬೇಕು ಅಂತ ಅಂದುಕೊಂಡಿದ್ದರು. ಇದಕ್ಕೆ ಅವರು ಸಾಕಷ್ಟು ಶ್ರಮ ಕೂಡ ಪಟ್ಟಿದ್ದಾರೆ. 6 ತಿಂಗಳ ಕಾಲ ಪ್ರಯಾಣ ಮಾಡಿ, ಗೂಗಲ್​​ ಅರ್ತ್​​​ನಲ್ಲಿ ಮ್ಯಾರಿ ಮೀ ಎಂದು ಬರೆಯುವ ಮೂಲಕ ತನ್ನ ಗರ್ಲ್​​ಫ್ರೆಂಡ್​​ಗೆ ಪ್ರಪೋಸ್​ ಮಾಡಿದ್ದಾರೆ. ಇದನ್ನ ಗೂಗಲ್​​ ಇಂದು ಬೆಳಗ್ಗೆ ಟ್ವಿಟರ್​​ನಲ್ಲಿ ತಿಳಿಸಿದ್ದು, ಈಗ ವಿಶ್ವದಾದ್ಯಂತ ಸಾಕಷ್ಟು ಸುದ್ದಿಯಾಗ್ತಿದೆ.

ತಕಾಹಶಿ ಕಳೆದ 10 ವರ್ಷಗಳಿಂದ ಗೂಗಲ್​ ಅರ್ತ್​​​ ಹಾಗೂ ಸ್ಟ್ರೀಟ್​​ ವ್ಯೂ ಬಳಸಿ ಜಿಪಿಎಸ್​ ಆರ್ಟ್​​ ರಚನೆ ಮಾಡುತ್ತಿದ್ದಾರೆ. ಇದನ್ನ ತನ್ನ ಪ್ರಪೋಸಲ್​​ಗಾಗಿ ಬಳಸಿಕೊಳ್ಳಲು ಅವರು ನಿರ್ಧರಿಸಿದ್ದರು. ಜಿಪಿಎಸ್​​ ಆರ್ಟ್​​ನಲ್ಲಿ ವ್ಯಕ್ತಿ ಜಿಪಿಎಸ್​​ ಡಿವೈಸ್​​ ಬಳಸಿ ನಿರ್ದಿಷ್ಟ ಮಾರ್ಗದಲ್ಲಿ ಪ್ರಯಾಣ ಮಾಡುತ್ತಾರೆ. ಬಳಿಕ ತಾವು ಪ್ರಯಾಣಿಸಿದ ಮಾರ್ಗವನ್ನ ಗೂಗಲ್​ ಅರ್ತ್​​​ನಂತಹ ಮ್ಯಾಪಿಂಗ್​ ಟೂಲ್​​ನಲ್ಲಿ ಅಪ್​​ಲೋಡ್​​​ ಮಾಡಿದಾಗ ಅದಕ್ಕೊಂದು ಶೇಪ್​​ ಸಿಗುತ್ತದೆ. ತಕಾಹಶಿ ಪ್ರಯಾಣಿಸಿದ ಮಾರ್ಗ ಜಪಾನ್​​​ ಮ್ಯಾಪ್ ಮೇಲೆ ಮ್ಯಾರಿ ಮೀ ಎಂದು ಬರೆದಂತೆ ​ಶೇಪ್​​​ ಪಡೆದಿದೆ.  ಈ ರೀತಿ ಮಾಡಿರುವುದು ವಿಶ್ವದಲ್ಲೇ ಇದೇ ಮೊದಲಾಗಿದ್ದು, ದಾಖಲೆ ನಿರ್ಮಿಸಿದೆ.

ತಕಾಹಶಿ ಈ ಪ್ರಪೋಸಲ್​ಗಾಗಿ ಸಾಕಷ್ಟು ಶ್ರಮ ವಹಿಸಿದ್ದರು. ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಹೊಕ್ಕಾಯ್ಡೋದಿಂದ ಕಾಗೋಶಿಮಾವರೆಗೆ ಪ್ರಯಾಣ ಮಾಡಲು ಪ್ಲಾನ್ ಮಾಡಿದ್ದರು. 6 ತಿಂಗಳ ಪ್ರಯಾಣದ ಬಳಿಕ ಸುಮಾರು 7000 ಕಿ.ಮೀ ಕ್ರಮಿಸಿ ಮ್ಯಾರಿ ಮೀ ಎಂಬ ಸ್ಪೆಲ್ಲಿಂಗ್​ ಬರುವ ಆಕಾರ ರಚಿಸಿದ್ದಾರೆ. ಕೊನೆಗೆ ಒಂದು ಹಾರ್ಟ್​​ ಕೂಡ ಬರುವಂತೆ ನಿರ್ದಿಷ್ಟ ಮಾರ್ಗದಲ್ಲೇ ಅವರು ಪ್ರಯಾಣ ಮಾಡಿದ್ದಾರೆ. ಇಷ್ಟೊಂದೆಲ್ಲ ಮಾಡಿದ್ಮೇಲೆ ತಕಾಹಶಿಯ ಗರ್ಲ್​ಫ್ರೆಂಡ್​ ಹೂ ಅನ್ನದೇ ಇರ್ತಾಳಾ? ಆಕೆ ಈ ಮದುವೆ ಪ್ರಪೋಸಲ್​​​ಗೆ ಯೆಸ್​ ಎಂದಿದ್ದಾಳೆ. ಇದು ನನಗೆ ದೊಡ್ಡ ಸರ್​ಪ್ರೈಸ್​​ ಆಗಿತ್ತು. ಜಗತ್ತಿನ ಗ್ರೇಟೆಸ್ಟ್​​ ಲವ್​ನ ಅನುಭವ ನನಗಾಯ್ತು ಎಂದು ಆಕೆ  ಹೇಳಿದ್ದಾಳೆ. ಇನ್ನು ತಕಾಹಶಿಯ ಈ ಅದ್ಭುತ ಪ್ರಪೋಸಲ್​​ ಸ್ಟೋರಿ ಈಗ ವೈರಲ್ ಆಗ್ತಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv