‘ನಿಖಿಲ್ ಪರ ನಾವೆಲ್ಲ ಓಡಾಡುವುದನ್ನ ಸಹಿಸದೇ ₹150 ಕೋಟಿ ಆಡಿಯೋ ಮಾಡಿದ್ದಾರೆ’

ಮಂಡ್ಯ: ₹ 150 ಕೋಟಿ ಆಡಿಯೋ ಸಂಬಂಧಪಟ್ಟಂತೆ ಮಂಡ್ಯ ಸಂಸದ ಎಲ್.ಆರ್. ಶಿವರಾಮೇಗೌಡರ ಪುತ್ರ ಚೇತನ್ ಗೌಡ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಚೇತನ್ ಗೌಡ, ನಾನು ಈಗಷ್ಟೆ ಆಡಿಯೋ ತುಣುಕು ಕೇಳಿದೆ. ಅದು ನನ್ನ ಧ್ವನಿ ಎಂದು ನನಗೆ ಅನಿಸುತ್ತಿಲ್ಲ. ಮೊದಲ ಆಡಿಯೋಗೂ, ಎರಡನೇ ಆಡಿಯೋಗೂ ಬಹಳ ವ್ಯತ್ಯಾಸವಿದೆ. ಅದರಲ್ಲಿ ಮಾತನಾಡುತ್ತಿರುವ ವಿಚಾರ ಅಷ್ಟು ಸುಲಭ ಅನಿಸಲ್ಲ. ಚುನಾವಣೆ ನಡೆಯೋದು ಮೈತ್ರಿ ಸರ್ಕಾರದ ಸಾಧನೆ ಮೇಲೆ. ನಮ್ಮ‌ ವಿರೋಧ ಪಕ್ಷದವರು ಮಾಡುತ್ತಿರುವ ತಂತ್ರಗಾರಿಕೆ ಇದು. ನನಗೆ ಮತ್ತು ನಮ್ಮ ತಂದೆಯ ಹೆಸರಿಗೆ ಚ್ಯುತಿ ತರಲು ವಿರೋಧಿಗಳು ಮಾಡಿರುವ ಆಡಿಯೋ. ಇದು ಟೂರಿಂಗ್ ಟಾಕೀಸ್‌ನ ಭಾಗ. ಪಕ್ಷೇತರ ಅಭ್ಯರ್ಥಿಯ ಕಡೆಯವರು ಯಾರೋ ಮಾಡಿರಬಹುದು. ಅವರು ಹೋದಲೆಲ್ಲ ಜನ ಸೇರುತ್ತಿದ್ದಾರೆ. ಆದ್ರೆ ಅಂತಹ ಪ್ರತಿಕ್ರಿಯೆ ಸಿಗುತ್ತಿಲ್ಲ. ಹಾಗಾಗಿ ಧೃತಿಗೆಟ್ಟು ಈ ರೀತಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನು ಪಿ.ರಮೇಶ್ ಭೇಟಿ ಮಾಡಿಲ್ಲ. ಈ ಹಿಂದೆ ಅವರು ನಮ್ಮ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಭೆಗೆ ಬರುತ್ತಿದ್ದರು. ಪಿ.ರಮೇಶ್, ಸಿ.ವಿ.ರಾಮನ್ ನಗರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ರು. ಆಡಿಯೋ ಕೇಳಿ ನನಗೇ ಶಾಕ್ ಆಗುತ್ತಿದೆ.  ನಾವೆಲ್ಲ ಯುವಕರಾಗಿದ್ದು ನಿಖಿಲ್ ಪರ ಓಡಾಡುವುದನ್ನು ಸಹಿಸಲಾಗದೆ ಹತಾಶೆಗೊಂಡು ಈ ರೀತಿ ಮಾಡಿದ್ದಾರೆ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಜಿಲ್ಲೆಯ ಜನರಲ್ಲೂ ಮನವಿ ಮಾಡುತ್ತೇನೆ. ಸಿನಿಮಾದವರನ್ನು ಈಗ ಹೇಗೆ ಮನರಂಜನೆಯ ರೀತಿ ನೋಡುತ್ತೀರೋ ಹಾಗೆ ಆಡಿಯೋವನ್ನ ನೋಡಿ ಬಿಡಿ. ಈ ರೀತಿ ಮಾಡುವವರು ವಿಕೃತ ಮನೋಭಾವದವರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv