ಮಾಂದಲಪಟ್ಟಿಗೆ ಇನ್ಮುಂದೆ ಖಾಸಗಿ ಬಾಡಿಗೆ ಜೀಪ್​ಗಳು ಓಡಾಡಂಗಿಲ್ಲ..!

ಕೊಡಗು: ಪ್ರವಾಸಿಗರ ಹಾಟ್‍ಸ್ಪಾಟ್ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ಸಾಲಿನಲ್ಲಿ ಮಾಂದಲಪಟ್ಟಿ ಮುಂಚೂಣಿ ಸ್ಥಾನ. ಆದ್ರೆ ಕೊಡಗು ಜಿಲ್ಲಾಡಳಿತ ಮಾಂದಲಪಟ್ಟಿಗೆ ಖಾಸಗಿ ಬಾಡಿಗೆ ಜೀಪುಗಳ ಓಡಾಟವನ್ನು ನಿಷೇಧಿಸಿದೆ. ಮಡಿಕೇರಿಯಿಂದ 22 ಕಿಲೋ ಮೀಟರ್ ದೂರದಲ್ಲಿರುವ ಮಾಂದಲಪಟ್ಟಿ ಸೌಂದರ್ಯ ನೋಡೋದಕ್ಕೆ ನಿತ್ಯ ಸಾವಿರಾರು ಜನ ಬರ್ತಾರೆ.

ವೀಕೆಂಡ್​​ನಲ್ಲಂತೂ ಪ್ರವಾಸಿಗರೇ ಇಲ್ಲಿ ತುಂಬಿರುತ್ತಾರೆ. ಆದ್ರೆ ಇಲ್ಲಿಗೆ ತೆರಳುವ ರಸ್ತೆ ದುಸ್ಥಿತಿಯಲ್ಲಿರುವುದರಿಂದ ಸ್ಥಳೀಯರು ಜೀಪ್​​ಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಮೂಲಕ ಪ್ರಕೃತಿ ಸೌಂದರ್ಯವನ್ನು ಸವಿಯಲು ಅನುವು ಮಾಡಿಕೊಡುತ್ತಿದ್ದರು. ಜೀಪು ಚಾಲಕರು ಮಾಂದಲಪಟ್ಟಿಗೆ  ಪ್ರವಾಸಿಗರನ್ನು ಕರೆದೊಯ್ಯುವುದನ್ನು ಮಾತ್ರ ಮಾಡಿದ್ದರೆ, ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಪ್ರವಾಸಿಗರ ಜತೆಗೆ ದರ್ಪದಿಂದ ವರ್ತಿಸುತ್ತಾರೆ. ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆಂದು ಅನೇಕರು ದೂರಿದ್ದರು. ಈ ನಡುವೆ ಕೆಲವು ದಿನದ ಹಿಂದೆ ಕೇಂದ್ರ ಸಚಿವ ಸದಾನಂದಗೌಡರ ಪುತ್ರ ಬಂದಿದ್ದಾಗ ಆತನೊಂದಿಗೆ ವಾಗ್ವಾದ ನಡೆದಿತ್ತು. ಇದಾದ ಬಳಿಕ ದಿಢೀರನೆ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಾಡಿಗೆ ಜೀಪುಗಳ ಪ್ರವೇಶವನ್ನು ನಿರ್ಬಂಧಿಸಿದೆ. ಹೀಗಾಗಿ ಸುಮಾರು 4 ಕಿ.ಮೀ. ಕಠಿಣ ಹಾದಿಯಲ್ಲಿ ನಡೆದುಕೊಂಡು ಸಾಗಬೇಕಾದ ಪರಿಸ್ಥಿತಿ ಪ್ರವಾಸಿಗರಿಗೆ ಎದುರಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜೀಪ್‍ನವರಿಂದ ಸಮಸ್ಯೆಯಾದ ಕಾರಣಕ್ಕೆ ತಾತ್ಕಾಲಿಕವಾಗಿ ಈ ತೀರ್ಮಾನ ಕೈಗೊಂಡಿದ್ದೇವೆ. ಮುಂದೆ ಪೊಲೀಸ್ & ಆರ್​​ಟಿಒ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv