ತಲೆಯೊಳಗೇ ಮೊಳೆ ಇದ್ದಿದ್ದು ಆ ವ್ಯಕ್ತಿಗೆ ಗೊತ್ತೇ ಇರಲಿಲ್ಲ..!

ಕಳೆದ ವಾರ ಚೀನಾದಲ್ಲಿ ವ್ಯಕ್ತಿಯೊಬ್ಬರು, ತನಗೆ ವಿಪರೀತ ತಲೆನೋವು ಅಂತ ಆಸ್ಪತ್ರೆಗೆ ಹೋಗಿದ್ದರು. ಅವರನ್ನು ವೈದ್ಯರು ಪರೀಕ್ಷಿಸಿದಾಗ ಬುರುಡೆಯಲ್ಲಿ 4.8 ಸೆ.ಮೀ ಉದ್ದದ ಮೊಳೆ ಪತ್ತೆಯಾಗಿದೆ. ಆದ್ರೆ ಆಶ್ಚರ್ಯ ಏನಂದ್ರೆ ತಲೆಯೊಳಗೆ ಮೊಳೆ ಹೋಗಿದ್ದು ಹೇಗೆ ಅನ್ನೋದೇ ನನಗೆ ಗೊತ್ತಿಲ್ಲ ಅಂತ ಆ ವ್ಯಕ್ತಿ ಹೇಳಿದ್ದಾರೆ.

43 ವರ್ಷದ ಹೂ ಎಂಬವರ ತಲೆಯಲ್ಲಿ ಈ ಮೊಳೆ ಪತ್ತೆಯಾಗಿದೆ. ಇವರು ಚಾಂಗ್​ಯಾಂಗ್​​ನ ಸಿಮೆಂಟ್ ಫ್ಯಾಕ್ಟರಿಯೊಂದರಲ್ಲಿ ಸೂಪರ್​ವೈಸರ್​ ಆಗಿ ಕೆಲಸ ಮಾಡ್ತಿದ್ದಾರೆ. ಅಕ್ಟೋಬರ್​ 5ರಂದು ಹೂ, ಚಾಂಗ್​ಯಾಂಗ್​ ಕೌಂಟಿ ಪೀಪಲ್ಸ್​ ಆಸ್ಪತ್ರೆಗೆ ಹೋಗಿದ್ದರು. ತುಂಬಾ ದಿನಗಳಿಂದ ತಲೆ ನೋವು ಇತ್ತು. ಆದ್ರೆ ಅದರ ಬಗ್ಗೆ ಹೆಚ್ಚು ಗಮನಹರಿಸಿರಲಿಲ್ಲ. ಆದ್ರೆ ತಲೆನೋವು ವಿಪರೀತವಾದ ಕಾರಣ ವೈದ್ಯರ ಬಳಿ ಹೋಗಲೇಬೇಕಾಯ್ತು ಎಂದು ಹೂ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗ, ಹೂ ಅವರ ಬುರುಡೆಯ ಬಲಭಾಗದಲ್ಲಿ ಮೊಳೆ ಇದ್ದಿದ್ದು ಕಂಡು ಆಶ್ಚರ್ಯಗೊಂಡಿದ್ದಾರೆ. ಸಿಮೆಂಟ್​ ಫ್ಯಾಕ್ಟರಿಯಲ್ಲಿ ಹೂ ಅವರ ಕೆಲಸ ಸೆಕ್ಯೂರಿಟಿ ಕ್ಯಾಮೆರಾಗಳನ್ನ ನೋಡಿಕೊಳ್ಳುವುದಾಗಿದೆ. ಹೀಗಾಗಿ ನಾನು ಕೆಲಸ ಮಾಡುವ ಜಾಗದಲ್ಲಿ ಮೊಳೆಗಳು ಇರಲ್ಲ. ಮೊಳೆ ತಲೆಯೊಳಗೆ ಹೇಗೆ ಹೋಯ್ತು ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಮೊಳೆ ಬುರುಡೆಯೊಳಗೆ ಹೇಗೆ ಹೋಯ್ತು ಅನ್ನೋದು ಸದ್ಯಕ್ಕೆ ರಹಸ್ಯವಾಗೇ ಉಳಿದಿದ್ದು, ಹೂ ಅವರ ತಲೆಯಿಂದ ಮೊಳೆ ಹೊರತೆಗೆಯಲು ಅವರನ್ನು ಬೇರೆ ದೊಡ್ಡ ಆಸ್ಪತ್ರೆಗೆ ಕಳಿಸಲಾಗಿದೆ.

ನಿಮ್ಮ ಸಲಹೆ , ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv