ಯುವತಿಯ ಅಪ್ಪನನ್ನ ಕಿಡ್ನಾಪ್ ಮಾಡಿ, “ಮದ್ವೆ ಮಾಡ್ಕೊ, ಒಳ್ಳೇ ಹುಡುಗ” ಅಂತ ಹೇಳಿಸಿದ ಯುವಕ​

ನವದೆಹಲಿ: ಹುಡುಗಿಗೋಸ್ಕರ ಆಕೆಯ ತಂದೆಯನ್ನೇ ಕಿಡ್ನಾಪ್​ ಮಾಡಿದ್ದ ಯುವಕನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ದೆಹಲಿ ಪೊಲೀಸರು, ಉತ್ತರಪ್ರದೇಶದ ಮಥುರಾದಲ್ಲಿದ್ದ ಯುವಕನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. 24 ವರ್ಷದ ಸಂಜು ಬಂಧಿತ ಆರೋಪಿ. ಕಳೆದ ಭಾನುವಾರ ಬೆಳಗ್ಗೆ ಸಂಜು ತನ್ನ ಸ್ನೇಹಿತರ ಜೊತೆಗೂಡಿ ಯುವತಿಯ ತಂದೆಯನ್ನ, ಅವರು ಕೆಲಸ ಮಾಡ್ತಿದ್ದ ದ್ವಾರಾಕಾದ ಅಂಗಡಿಯಿಂದ ಕಿಡ್ನಾಪ್ ಮಾಡಿದ್ದ. ನಂತರ ಅವರಿಂದ ಮಗಳಿಗೆ ಫೋನ್ ಮಾಡಿಸಿ, “ಸಂಜುನನ್ನು ಮದುವೆಯಾಗು, ಆತ ತುಂಬಾ ಒಳ್ಳೇ ಹುಡುಗ” ಎಂದು ಬಲವಂತವಾಗಿ ಹೇಳಿಸಿದ್ದ. ಈ ವೇಳೆ ತಂದೆ, ತನ್ನನ್ನು ಹರಿಯಾಣದ ಸೋನಿಪತ್​​ನಲ್ಲಿ ಇರಿಸಿರುವುದಾಗಿಯೂ ಹೇಳಿದ್ದರು.

ಅಷ್ಟೊತ್ತಿಗಾಗಲೇ ಯುವತಿಯ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು,​ ಕರೆ ಬಂದ ಲೊಕೇಷನ್​ ಟ್ರೇಸ್​ ಮಾಡಿ ಸೋಮವಾರ ರಾತ್ರಿ ಮಥುರಾದಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ. ಹಾಗೇ ಯುವತಿಯ ತಂದೆಯನ್ನು ರಕ್ಷಣೆ ಮಾಡಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರೋ ಯುವತಿ, ನನಗೆ ಸಂಜು ಪರಿಚಯವಿದ್ದ. ಹೀಗಾಗಿ ಆತನೇ ನನ್ನ ತಂದೆಯನ್ನು ಕಿಡ್ನಾಪ್ ಮಾಡಿರಬಹುದು ಎಂಬ ಶಂಕೆ ಇತ್ತು ಎಂದು ಹೇಳಿದ್ದಾರೆ. ಇನ್ನು ಸಂಜು ವಿಚಾರಣೆ ವೇಳೆ, ತಾನು ಯುವತಿಯನ್ನು ಮದುವೆಯಾಗ ಬಯಸಿದ್ದಾಗಿ ಹೇಳಿದ್ದಾನೆ. ಇದಕ್ಕೆ ಆಕೆಯ ಕುಟುಂಬಸ್ಥರ ವಿರೋಧವಿತ್ತು, ಆಕೆಯನ್ನು ಊರಿಗೆ ಕಳಿಸಿಬಿಟ್ಟಿದ್ದರು ಎಂದು ಹೇಳಿದ್ದಾನೆ. ಈ ಕೃತ್ಯವೆಸಗಲು ಸಂಜುಗೆ ಸಹಾಯ ಮಾಡಿದ ಸ್ನೇಹಿತರಿಗಾಗಿ ಸದ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv