68 ಸೆಕೆಂಡ್​ಗಳಲ್ಲಿ 50 ಮೆಣಸಿನಕಾಯಿ ತಿಂದು ಸ್ಪರ್ಧೆ ಗೆದ್ದ

ಬೀಜಿಂಗ್​​: ಊಟ ಮಾಡುವಾಗ ಅಪ್ಪಿ ತಪ್ಪಿ ಮೆಣಸಿನಕಾಯಿಯನ್ನ ಕಚ್ಚಿಬಿಟ್ಟರೆ ತಡೆಯಲಾಗದ ಖಾರ ಆಗುತ್ತೆ. ಎಷ್ಟು ನೀರು ಕುಡಿದರೂ ತಕ್ಷಣಕ್ಕೆ ಕಡಿಮೆಯಾಗೋದಿಲ್ಲ. ಇನ್ನು ಮೆಣಸಿನಕಾಯಿಯ ಪೂಲ್​ನಲ್ಲಿ ಕುಳಿತುಕೊಂಡು ಖಾರವಾದ ಮೆಣಸಿನಕಾಯಿಗಳನ್ನ ತಿನ್ನೋದಂದ್ರೆ ಸುಮ್ಮನೆನಾ? ಚೀನಾದಲ್ಲಿ ಇಂಥಹದ್ದೊಂದು ಸ್ಪರ್ಧೆ ನಡೆದಿದ್ದು, ಯುವಕನೊಬ್ಬ ಒಂದಲ್ಲ, ಎರಡಲ್ಲ, ಬರೋಬ್ಬರಿ 50 ಮೆಣಸಿನಕಾಯಿಗಳನ್ನ ತಿಂದಿದ್ದಾನೆ.

ಚೀನಾದಲ್ಲಿ ವಾರ್ಷಿಕ ಚಿಲ್ಲಿ ಪೆಪ್ಪರ್​​ ಹಬ್ಬಕ್ಕೆ ಸೋಮವಾರದಂದುಚಾಲನೆ ಸಿಕ್ಕಿದೆ. ಮೊದಲ ದಿನ ಇಲ್ಲಿನ ಹುನಾನ್​ ಪ್ರಾಂತ್ಯದಲ್ಲಿ ಮೆಣಸಿನಕಾಯಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಯುವಕನೊಬ್ಬ 68 ಸೆಕೆಂಡ್​ಗಳಲ್ಲಿ ಬರೋಬ್ಬರಿ 50 ಮೆಣಸಿನಕಾಯಿಗಳನ್ನ ತಿಂದು ಸ್ಪರ್ಧೆಯಲ್ಲಿ ವಿಜೇತನಾಗಿದ್ದಾನೆ. ಸ್ಥಳೀಯ ಯುವಕ ಟಾಂಗ್ ಶುವಾಹೈ ಸ್ಪರ್ಧೆಯನ್ನು ಗೆದ್ದು, 3 ಗ್ರಾಂನ 24 ಕ್ಯಾರೆಟ್​ ಚಿನ್ನದ ನಾಣ್ಯವನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾನೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ 10 ಸ್ಪರ್ಧಿಗಳು ತಟ್ಟೆ ತುಂಬ ಖಾರವಾದ ಟೊಬಾಸ್ಕೋ ಮೆಣಸಿನಕಾಯಿಗಳನ್ನ ಇಟ್ಟುಕೊಂಡು ರೇಸ್​​ಗೆ ಇಳಿದಿದ್ದರು. ತಾನೇ ಫಸ್ಟ್​​ ಬರಬೇಕು ಅಂತ ಖಾರವಾದ ಮೆಣಸಿನಕಾಯಿಗಳನ್ನ ಕಚ್ಚಿ ತಿಂದರು. ಇದಿಷ್ಟೇ ಅಲ್ಲ ಅವರೆಲ್ಲಾ ನೀರು ಹಾಗೂ ಮೂರು ಟನ್​ ಮೆಣಸಿನಕಾಯಿಗಳನ್ನು ಸುರಿದಿದ್ದ ಪೂಲ್​​ನಲ್ಲಿ ಕುಳಿತು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯರು ಕೂಡ ಸ್ಥಳದಲ್ಲಿದ್ದರು. ಕೊನೆಗೆ ಸ್ಪರ್ಧಿ ಟಾಂಗ್​​​​ 68 ಸೆಕೆಂಡ್​​ಗಳಲ್ಲಿ 50 ಮೆಣಸಿನಕಾಯಿಗಳನ್ನ ತಿಂದು ವಿಜಯಶಾಲಿ ಎನಿಸಿಕೊಂಡ.

ಇನ್ನು ಈ ಟೊಬಾಸ್ಕೋ ಮೆಣಸಿನಕಾಯಿಗಳು ತುಂಬಾ ಖಾರವಾಗಿರುತ್ತದೆ. ಆದ್ರೆ ಪೂಲ್​​ನೊಳಗೆ ಹಾಕಿದ್ದ ಮೆಣಸಿನಕಾಯಿಗಳು ಸ್ವಲ್ಪ ಕಡಿಮೆ ಖಾರದ್ದು. ಸ್ಪರ್ಧಿಗಳ ಚರ್ಮಕ್ಕೆ ಕಿರಿಕಿರಿಯಾಗಬಾರದು ಅಂತ ಕಡಿಮೆ ಖಾರವುಳ್ಳ ಮೆಣಸಿನಕಾಯಿಗಳನ್ನ ಹಾಕಲಾಗಿತ್ತು.
ಈ ಚಿಲ್ಲಿ ಪೆಪ್ಪರ್​ ಹಬ್ಬ ಆಗಸ್ಟ್​​​ ಕೊನೆಯವರೆಗೂ ನಡೆಯಲಿದ್ದು, ಪ್ರತಿದಿನ ಮೆಣಸಿನಕಾಯಿ ತಿನ್ನೋ ಸ್ಪರ್ಧೆ ಇರುತ್ತದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv