ದೇವಸ್ಥಾನದಲ್ಲಿ ವಿಷ ಸೇವಿಸಿ ಸಾವಿಗೆ ಶರಣು

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಬತ್ತಲಹಳ್ಳಿಯ ತಿರುಮಲರಾಯ ಸ್ವಾಮಿ ದೇವಾಲಯದಲ್ಲಿ ವ್ಯಕ್ತಿಯೊರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗವಿಕುಂಟಹಳ್ಳಿಯ ನಿವಾಸಿ ಮಂಜುನಾಥ್ (40) ಎಂಬುವರು ವಿಷ ಸೇವಿಸಿ ಸಾವಿಗೆ ಶರಣಾಗಿದ್ದು, ಶುಕ್ರವಾರ ರಾತ್ರಿ ಏಕಾಏಕಿ ಖಿನ್ನತೆಗೆ ಒಳಗಾದವರಂತೆ ವರ್ತಸಿದ ಮಂಜುನಾಥ್‌, ಸುರಿವ ಮಳೆ ನಡುವೆಯೇ ಮನೆಯಿಂದ ಓಡಿಹೋಗಿ ಕಣ್ಮರೆಯಾಗಿದ್ದರು. ನಂತರ ಅವರು ದೇವಸ್ಥಾನದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊರಟಗೆರೆ ಮೂಲದ ಮಂಜುನಾಥ್ ಅವರಿಗೆ 12 ವರ್ಷಗಳ ಹಿಂದೆ ಗವಿಕುಂಟಹಳ್ಳಿಯ ಮಂಜುಳಾ ಎಂಬುವರೊಂದಿಗೆ ಮದುವೆಯಾಗಿತ್ತು. ಈ ದಂಪತಿ ಕಳೆದ 8 ವರ್ಷಗಳಿಂದ ಗವಿಕುಂಟಹಳ್ಳಿಯಲ್ಲಿಯೇ ಪ್ರತ್ಯೇಕ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೃತ ವ್ಯಕ್ತಿ ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದರು.
ಎರಡು ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದ ಮಂಜುನಾಥ್ ಶುಕ್ರವಾರ ರಾತ್ರಿ 9ರ ಸುಮಾರಿಗೆ ಏಕಾಏಕಿ ಮಾನಸಿಕ ಖಿನ್ನತೆಗೆ ಒಳಗಾದವರ ರೀತಿ ವರ್ತಿಸುತ್ತ ನಾನು ಸತ್ತು ಹೋಗುತ್ತೇನೆ ಎಂದು ಕೂಗಾಡಲು ಆರಂಭಿಸಿದ್ದರಂತೆ. ಪತ್ನಿ ಸಮಾಧಾನಪಡಿಸಿದರೂ ಸುಮ್ಮನಾಗಿರಲಿಲ್ಲ. ಸುರಿಯುವ ಮಳೆಯ ನಡುವೆಯೇ ಮನೆಯಿಂದ ಹೊರಗೆ ಓಡಿ ಹೋಗಿದ್ದರು. ರಾತ್ರಿ ಮಳೆ ನಿಂತ ಬಳಿಕ ಊರಲ್ಲಿ ಹುಡುಕಾಡಿದರೂ ಪತಿ ಪತ್ತೆಯಾಗಲಿಲ್ಲ. ಮನೆಗೆ ವಾಪಸ್ ಬರುತ್ತಾರೆ ಎಂದು ಕಾಯ್ದರು ಬರಲಿಲ್ಲ. ಬತ್ತಲಹಳ್ಳಿ ಜನರು ಬೆಳಿಗ್ಗೆ ಕರೆ ಮಾಡಿ ತಿಳಿಸಿದಾಗ ಆತ್ಮಹತ್ಯೆ ವಿಚಾರ ತನ್ನ ಗಮನಕ್ಕೆ ಬಂತು ಎಂದು ಮಂಜುಳಾ ಹೇಳಿದ್ದಾರೆ.
ಇನ್ನೂ ವಿಚಾರಣೆಯಲ್ಲಿ ದಂಪತಿ ಅನ್ಯೋನ್ಯವಾಗಿ ಇದ್ದರು ಎಂದು ತಿಳಿದು ಬಂದಿದೆ. ತನಿಖೆಯ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಬೇಕಿದೆ. ಗುಡಿಬಂಡೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *