ಪುಟ್ಬಾಲ್‌ ಅಕಾಡೆಮಿ ಕನಸು ಕಂಡ ಮಲೆನಾಡಿನ ಯುವಕ!

ಶಿವಮೊಗ್ಗ: ಕ್ರೀಡೆ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಊಟ, ನೀರು ಲೆಕ್ಕಿಸದೇ ಕ್ರೀಡೆಯನ್ನು ಆರಾಧಿಸುವ ಸಾವಿರಾರು ಕ್ರೀಡಾ ಪ್ರೇಮಿಗಳು ಸಿಗುತ್ತಾರೆ. ಈಗ ವಿಶ್ವದಾದ್ಯಂತ ಪುಟ್ಬಾಲ್​​ ವಿಶ್ವಕಪ್​ ಜ್ವರ ಏರುತ್ತಿರುವಂತೆಯೇ ಮಲೆನಾಡಿನ ಹುಡುಗನೊಬ್ಬ ಇಂಗ್ಲೆಂಡಿನ ಪುಟ್ಬಾಲ್​ ಕ್ಲಬ್​ನ ಸಹಾಯ ದೊಂದಿಗೆ ಶಿವಮೊಗ್ಗದಲ್ಲಿ ಪುಟ್ಬಾಲ್​ ಅಕಾಡೆಮಿಯೊಂದನ್ನು ಸ್ಥಾಪಿಸಲು ಮುಂದಾಗಿದ್ದಾರೆ.
ಶಿವಮೊಗ್ಗದ ಆಶುತೋಶ್​ ಪವಾರ್​ ಮಂಜಪ್ಪ ಎಂಬ ಯುವಕ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಇಂಗ್ಲೆಂಡಿನ ದಿ ಪುಟ್ಬಾಲ್​ ಅಸೋಶಿಯೇಷನ್​ನ ತರಬೇತುದಾರ ಹಾಗೂ ನಿರ್ವಹಣೆಯ ಪರವಾನಗಿಯನ್ನು ಆಶುತೋಶ್​ ಹೊಂದಿದ್ದಾರೆ. ಆದ್ರೆ, ಜಾಗತೀಕ ಮಾನ್ಯತೆ ಪಡೆದಿರುವ ಯೂನಿಯನ್​ ಆಫ್​​ ಪುಟ್ಬಾಲ್​ ಅಸೋಶಿಯೇಷನ್​(ಯುಇಎಫ್​ಎ) ವತಿಯಿಂದ ಪರವಾನಗಿ ಪಡೆಯುವ ಯತ್ನವನ್ನು ಮಾಡುತ್ತಿದ್ದಾರೆ.
ಪುಟ್ಬಾಲ್​ ಅಕಾಡೆಮಿ ಸ್ಥಾಪನೆಗೆ ಅಜ್ಜಿ ಸಹಕಾರ
ಇಂಗ್ಲೆಂಡಿನ ಯಾವುದೇ ವೃತ್ತಿಪರ ಕ್ಲಬ್​ನ ಸಹಕಾರದೊಂದಿಗೆ ಭಾರತದಲ್ಲಿ ಯಾವ ಪುಟ್ಬಾಲ್ ಅಕಾಡೆಮಿಗಳು ಕೆಲಸ ಮಾಡುತ್ತಿಲ್ಲ. ಆದರೆ, ಆಶುತೋಶ್ ಶಿವಮೊಗ್ಗದಲ್ಲಿ ಪುಟ್ಬಾಲ್​ ಅಕಾಡೆಮಿ ಸ್ಥಾಪಿಸುವ ಸಾಹಸಕ್ಕೆ ಮುಂದಾಗಿದ್ದು, ತಾವು ಹೊಂದಿರುವ ಪರವಾಗಿಯೊಂದಿಗೆ ತಮ್ಮ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ.
ಕಳೆದ ಸೆಪ್ಟೆಂಬರ್​ನಲ್ಲಿ ಇಂಗ್ಲೆಂಡ್​ನ ಪ್ರತಿಷ್ಠಿತ ವೃತ್ತಿಪರ ಕ್ಲಬ್‌ಗಳಾದ ಮ್ಯಾಂಚೆಸ್ಟರ್‌ ಯುನೈಟೆಡ್, ಚೆಲ್ಸಿಯಾ, ಆರ್ಸೆನಲ್, ಲಿಸ್ಟರ್ ಕ್ಲಬ್​ಗಳಿಗೆ ಆಶುತೋಶ್​ ಶಿವಮೊಗ್ಗದಲ್ಲಿ ಪುಟ್ಬಾಲ್​​ ಅಕಾಡೆಮಿ ಸ್ಥಾಪನೆಗೆ ಪರವಾನಗಿ ಕೋರಿ ಅರ್ಜಿ ಹಾಕಿದ್ದಾರೆ.
ಇನ್ನು ಆಶುತೋಶ್​ನ ಕನಸಿಗೆ ಅವರ ಅಜ್ಜಿ ಬೆಂಬಲವಾಗಿ ನಿಂತಿದ್ದಾರೆ. ಅಕಾಡೆಮಿಗೆ ಬೇಕಾದ ಜಾಗ ಕೊಡಿಸಲು ಸಹಕರಿಸಿದ್ದಾರೆ. ಪುಟ್ಬಾಲ್​ ಅಕಾಡೆಮಿ ಸ್ಥಾಪನೆಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಒಮ್ಮತ ಸೂಚಿಸಿದ್ದಾರೆ.

ಉದಯೋನ್ಮುಖ ಆಟಗಾರರಿಗೆ ತರಬೇತಿ
ಆಶುತೋಶ್ ಪ್ರಸ್ತುತ ಇಂಗ್ಲೆಂಡ್​ನ ಸೌತ್ ಹ್ಯಾಂಪ್ಟನ್ ಕ್ಲಬ್ ಸದಸ್ಯರಾಗಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ನಗರದ 130 ಉದಯೋನ್ಮುಖ ಪುಟ್ಬಾಲ್ ಆಟಗಾರರಿಗೆ ತರಬೇತಿ ನೀಡಿದ್ದರು. ಈ ತರಬೇತಿಯಲ್ಲಿ ಆಟಗಾರರಿಗೆ ಪುಟ್ಬಾಲ್ ನ ಪ್ರಾಥಮಿಕ ಅಂಶಗಳ ಜತೆಗೆ ಆಟದ ಕೆಲ ತಂತ್ರಗಳನ್ನೂ ತಿಳಿಸಿಕೊಟ್ಟಿದ್ದರು.
ಆಟಗಾರರರು ದೈಹಿಕ ಕ್ಷಮತೆ ಕಾಪಾಡಿಕೊಳ್ಳುವ ವಿಧಾನ, ಅದಕ್ಕೆ ಪೂರಕವಾಗಿ ಬೇಕಾಗಿರುವ ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡಿದ್ದರು. ಜತೆಗೆ, ತರಬೇತಿ ಅವಧಿಯಲ್ಲಿ ಸಣ್ಣದೊಂದು ಮ್ಯಾರಥಾನ್ ಸ್ಪರ್ಧೆ ನಡೆಸಿದ್ದರು. ಆಟಗಾರರ ನಡುವೆಯೇ ಪಂದ್ಯ ಏರ್ಪಡಿಸಿ ತಾವು ಹೇಳಿಕೊಟ್ಟ ತಂತ್ರಗಳನ್ನು ಮೈದಾನದಲ್ಲಿ ಹೇಗೆ ಬಳಸಬೇಕೆಂಬುದನ್ನು ಹೇಳಿಕೊಟ್ಟಿದ್ದರು.
ಸ್ವತಃ ಆಶುತೋಶ್​, ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಪುಟ್ಬಾಲ್ ಕಲಿತ್ತಿರುವುದನ್ನು ಸ್ಮರಿಸಿದ ಅವರು ಬೆಂಗಳೂರಿನ ಎಫ್​ಸಿ ಕ್ಲಬ್ ಪರವಾಗಿ ಆಡಿದ್ದಾರೆ. ಅಲ್ಲದೇ ದೇಶದ ಪ್ರತಿಷ್ಠಿತ ಮೋಹಾನ್ ಬಾಗಾನ್ ಕ್ಲಬ್‌ ಪರವಾಗಿ ಕೆಲ ಸಮಯ ಆಡಿದ್ದಾರೆ.
ಇಂಗ್ಲೆಂಡ್​ಗೆ ತೆರಳುವ ಮುನ್ನ ಒಂದು ವರ್ಷಕ್ಕೂ ಹೆಚ್ಚು ಸಮಯ ಸ್ಪೇನ್​ನಲ್ಲಿ ಪುಟ್ಬಾಲ್​​ ಆಡಿ ಅನುಭವ ಗಳಿಸಿದ್ದಾರೆ. ವೃತ್ತಿಪರ ಪುಟ್ಬಾಲ್ ಆಟಗಾರರಾದ ಆಶುತೋಶ್ ಅಂತಾರಾಷ್ಟ್ರೀಯ ಮಟ್ಟದ ತರಬೇತಿಯನ್ನು ಮಲೆನಾಡಿನ ಮಕ್ಕಳಿಗೆ ನೀಡುವ ಹಂಬಲ ಹೊಂದಿದ್ದಾರೆ. ಜನಪ್ರಿಯ ಪುಟ್ಬಾಲ್​ ಆಟವನ್ನು ತಮ್ಮ ಹುಟ್ಟೂರಿನಲ್ಲಿ ಜನಪ್ರಿಯಗೊಳಿಸುವ ಗುರಿಯನ್ನು ಆಶುತೋಶ್​ ಹೊಂದಿದ್ದಾರೆ.

ವಿಶೇಷ ವರದಿ: ವಿ.ಸಿ.ಪ್ರಸನ್ನ, ಶಿವಮೊಗ್ಗ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv