‘ಖರ್ಗೆ ಸೋಲಲು ಅವರ ಪುತ್ರ ಪ್ರಿಯಾಂಕ್ ಖರ್ಗೆ ಒಬ್ಬರೇ ಸಾಕು’ ಗುತ್ತೇದಾರ್ ಭವಿಷ್ಯ

ಕಲಬುರ್ಗಿ: ಕಾಂಗ್ರೆಸ್ ಪಕ್ಷದ ಓರ್ವ ಧೀಮಂತ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳಬೇಕಾಗಿತ್ತು. ಎಲ್ಲರನ್ನೂ ಮುಗಿಸಬೇಕು ತಾನೇ ಬೆಳೆಯಬೇಕು, ಯಾರು ಯಾರು ಪವರ್‌ಫುಲ್ ಇದ್ದಾರೆ ಅವರು ಬೆಳೆಯಬಾರದೆಂದು ಕುತಂತ್ರ ರಾಜಕಾರಣ ಮಾಡಿದ್ದಾರೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಮಲ್ಲಿಕಾರ್ಜುನ್ ಖರ್ಗೆಗೆ ತಿರುಗೇಟು ನೀಡಿದ್ದಾರೆ. ಸೋತವರು ಸಂಘ ಕಟ್ಟಿಕೊಂಡು ನನ್ನ ಸೋಲಿಸಲಿಕ್ಕೆ ಹೊರಟಿದ್ದಾರೆ ಎಂಬ ಖರ್ಗೆ ಹೇಳಿಕೆ ಸಂಬಂಧಿಸಿದಂತೆ ಹೊನಗುಂಟಾ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿರುವ ಗುತ್ತೇದಾರ್, ಪಕ್ಷದೊಳಗಿದ್ದು ನಮಗೆ ತೊಂದರೆ ಮಾಡಿರುವುದರಿಂದ ನಾವು ಸೋಲನುಭವಿಸಿದ್ದೇವು. ಪ್ರತಿ ಬಾರಿ ಎಲೆಕ್ಷನ್‌ನಲ್ಲಿ ನಮ್ಮನ್ನು ಸೋಲಿಸಬೇಕೆಂದು ನಮ್ಮ ಎದುರಿನ ಕ್ಯಾಂಡಿಡೇಟ್‌ಗೆ ದುಡ್ಡು ಕೊಡ್ತಿದ್ರು. ಆದರೂ ನಾವು ಆರಿಸಿ ಬರ್ತಿದ್ವಿ.

ಇದೆಲ್ಲಾ ಸಿಸ್ಟಮ್ ನೋಡಿಯೇ ನಾವು ಕಾಂಗ್ರೆಸ್ ಪಕ್ಷ ಬಿಟ್ಟು ಹೊರ ಬಂದ್ವಿ. ಸ್ವಾಭಿಮಾನದ ಪ್ರಶ್ನೆ ಬಂದಾಗ ನಾವು ಏಕೆ ಆ ಪಾರ್ಟಿಯಲ್ಲಿರಬೇಕು ಹೊರ ಬಂದ್ವಿ. ಇವರ ಹಾಗೇ ನಮಗೆ ಐವತ್ತು ವರ್ಷ ಅಧಿಕಾರ ಸಿಕ್ಕಿದ್ರೆ ಗುಲಬರ್ಗಾ ಬದಲಾವಣೆ ಮಾಡ್ತಿದ್ವಿ. ಕಾಲ ಬದಲಾವಣೆ ಆಗಿದೆ. ಕುತಂತ್ರ ರಾಜಕಾರಣದಿಂದ ಬಾಬುರಾವ್ ಚಿಂಚನಸೂರ್‌ರನ್ನು ಸೋಲಿಸಿದ್ರು. ವಿಧಾನಸಭೆ ಚುನಾವಣೆಗೂ ಮುನ್ನ ಬಾಬುರಾವ್ ಚಿಂಚನಸೂರ್ ಬಿಜೆಪಿ ಸೇರಿದ್ರೆ ಪ್ರಿಯಾಂಕ್ ಖರ್ಗೆ ಸಹ ಆರಿಸಿ ಬರ್ತಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಗೆ ಈ ಬಾರಿ ಸೋಲು ಖಚಿತ. ಇಡೀ ಜಿಲ್ಲೆಯೇ ಅವರ ಮೇಲೆ ಬೇಜಾರಿದೆ ಎಂದು ಖರ್ಗೆ ವಿರುದ್ಧ ಮಾಲಿಕಯ್ಯ ಗುತ್ತೇದಾರ್ ಹರಿಹಾಯ್ದರು.

‘ಖರ್ಗೆ ಸೋಲಲು ಅವರ ಪುತ್ರ ಪ್ರಿಯಾಂಕ್ ಖರ್ಗೆ ಒಬ್ಬರೇ ಸಾಕು’

ಮಲ್ಲಿಕಾರ್ಜುನ ಖರ್ಗೆ ಪಾಪದ ಕೊಡ ತುಂಬಿದೆ. ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಜೀವಂತ ಇದ್ದಿದ್ರೆ ಅವರೂ ನಮ್ಮ ಬೆಂಬಲಕ್ಕೆ ಬರ್ತಿದ್ರು. ಖಮರುಲ್ ಇಸ್ಲಾಂ ಸಾವಿಗೆ ಮಲ್ಲಿಕಾರ್ಜುನ ಖರ್ಗೆಯೇ ಕಾರಣ ಅಂತಾ ಬಹಿರಂಗವಾಗಿಯೇ ಹೇಳಿದ್ದೇನೆ. ಇಡೀ ಹೈದರಾಬಾದ್ ಕರ್ನಾಟಕಕ್ಕೆ ಖಮರುಲ್ ಇಸ್ಲಾಂ ಒಬ್ಬರೇ ಅಲ್ಪಸಂಖ್ಯಾತ ಮುಖಂಡರಾಗಿದ್ರು. ವಿನಾಕಾರಣ ಅವರನ್ನು ಸಂಪುಟದಿಂದ ಕೈ ಬಿಟ್ರು, ಅಧಿಕಾರದಲ್ಲಿದ್ರೆ ಅವರೂ ಸಾಯ್ತಿರಲಿಲ್ಲ. ಅವರ ಆತ್ಮೀಯ‌ ಮಿತ್ರ ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್‌ಗೂ ಸಂಪುಟದಲ್ಲಿ ಸ್ಥಾನ ಕೊಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಸೋಲಲು ಅವರ ಮಗ ಪ್ರಿಯಾಂಕ್ ಖರ್ಗೆ ಒಬ್ಬರೇ ಸಾಕು. ಸ್ವಾರ್ಥ ರಾಜಕಾರಣ, ಅವರ ಮಗನ ನಡವಳಿಕೆ ಮಲ್ಲಿಕಾರ್ಜುನ ಖರ್ಗೆರಿಗೆ ದೊಡ್ಡ ಪೆಟ್ಟಾಗಿದೆ. ಈ ಬಾರಿ ಚುನಾವಣೆಯಲ್ಲಿ ಖರ್ಗೆ ಸೋಲು ನೂರಕ್ಕೆ ನೂರು ಖಚಿತ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv