ಸಾಯಬೇಕೇ? ಬದುಕಬೇಕೇ? ಎಂದು ಪೋಲ್ ಸೃಷ್ಟಿಸಿ ಯುವತಿ ಆತ್ಮಹತ್ಯೆ..!

ಮಲೇಶಿಯಾ: ತಾನು ಸಾಯಬೇಕೇ? ಬೇಡವೇ ಎಂದು ಕೇಳಿ ತನ್ನ ಇನ್ಸ್‌ಟಾಗ್ರಾಮ್‌ ಅಕೌಂಟ್‌ನಲ್ಲಿ ಪೋಲ್ ಮಾಡಿದ 16ರ ಹರೆಯದ ಹುಡುಗಿಯೊಬ್ಬಳು ಸಾವಿಗೆ ಶರಣಾಗಿರೋ ಆಘಾತಕಾರಿ ಘಟನೆ ಮಲೇಶಿಯಾದಲ್ಲಿ ನಡೆದಿದೆ.

ಮೇ13ನೇ ತಾರೀಖು ತನ್ನ ಇನ್ಸ್‌ಟಾಗ್ರಾಮ್‌ನಲ್ಲಿ ಈ ಹುಡುಗಿ ‘ತುಂಬಾ ಮುಖ್ಯವಾದ ವಿಷಯ, D/L (ಸಾಯಬೇಕೇ/ ಬದುಕಬೇಕೇ) ಎರಡರಲ್ಲಿ ಒಂದನ್ನ ಆಯ್ಕೆ ಮಾಡಿ’ ವೋಟ್ ಮಾಡಿ ಅಂತಾ ಬರೆದು ಪೋಲ್ ಸೃಷ್ಟಿ ಮಾಡಿದ್ಲು. ಇದು ಆಕೆ ಸಾವಿಗೆ ಶರಣಾಗೋ ಕೆಲ ಗಂಟೆ ಮುಂಚಿತವಾಗಿ ಸೃಷ್ಟಿಸಿದ್ದ ಪೋಲ್. ಈ ಪೋಸ್ಟ್‌ಗೆ ಶೇ.69ರಷ್ಟು ಇನ್ಸ್‌ಟಾಗ್ರಾಮ್ ಫಾಲೋವರ್ಸ್ ‘ಸಾಯಬೇಕು’ ಎಂದು ವೋಟ್ ಹಾಕಿದ್ದರು. ಇದ್ರಿಂದ ಮನನೊಂದು ಖಿನ್ನತೆಗೊಳಗಾದ ಹುಡುಗಿ ಎತ್ತರದ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸರಾವಾಕ್ ನಗರದ ಪೊಲೀಸರು ತಿಳಿಸಿದ್ದಾರೆ.

ಮಲೇಶಿಯನ್ ಕಾನೂನಿನ ಪ್ರಕಾರ ಅಪ್ರಾಪ್ತ ವಯಸ್ಕರಿಗೆ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಸಾಬೀತಾದ್ರೆ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಅಥವಾ 20 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತೆ. ಈ ಪ್ರಕರಣದಲ್ಲಿ ಯಾರೆಲ್ಲಾ ನೀನು ಸಾಯಬೇಕು ಅಂತಾ ವೋಟ್ ಮಾಡಿದ್ದಾರೋ ಅವರೆಲ್ಲಾ ಆತ್ಮಹತ್ಯೆಗೆ ಪ್ರಚೋದನೆ ನೀಡದ ಆರೋಪ ಎದುರಿಸಬೇಕಾಗುತ್ತದೆ.

ಹೀಗಾಗಿ ವಕೀಲ ರಾಮ್‍ಕೃಪಾಲ್ ಸಿಂಗ್ ಅನ್ನೋರು D ಎಂದು ಪೋಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅತಿ ಹೆಚ್ಚು ನೆಟಿಜನ್ಸ್ ನೀನು ಬದುಕಬೇಕು ಅಂತಾ ವೋಟ್ ಮಾಡಿದ್ರೆ, ಆಕೆ ಇಂದು ಬದುಕಿರುತ್ತಿದ್ದಳು ಅನ್ನಿಸುತ್ತೆ ಎಂದು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತಂಕ ವ್ಯಕ್ತಪಡಿಸಿರೋ ಮಲೇಷ್ಯಾದ ಯುವ ಹಾಗೂ ಕ್ರೀಡಾ ಸಚಿವರಾದ ಸಯ್ಯದ್ ಸಾದಿಕ್ ಸಯ್ಯದ್ ಅಬ್ದುಲ್ ರೆಹಮಾನ್ ಬಾಳಿಬದುಕಬೇಕಾದ ಹುಡುಗಿ ಹೀಗೆ ಸಾವನ್ನಪ್ಪಿದ್ದು ದುರ್ದೈವ. ಈ ದೇಶದ ಯುವ ಜನತೆಯ ಮಾನಸಿಕ ಆರೋಗ್ಯದ ಬಗ್ಗೆ ನನಗೆ ಚಿಂತೆ ಆಗುತ್ತಿದೆ. ಇದು ರಾಷ್ಟ್ರೀಯ ಸಮಸ್ಯೆ ಹಾಗೂ ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಒಟ್ಟಿನಲ್ಲಿ ಈ ಸೋಶಿಯಲ್​ ಮೀಡಿಯಾ ಅನ್ನೋದು ಜನ-ಜೀವನ-ಬದುಕಿನ ಮೇಲಷ್ಟೇ ಅಲ್ಲ ಬೆಡ್​ರೂಮ್​ ಕೂಡ ಪ್ರವೇಶ ಮಾಡಿತ್ತು. ಆದ್ರೆ, ಈಗಿದು ಸಾವನ್ನೋ ನಿರ್ಧರಿಸುವಂಥ ಸಾಧನವಾಗಿರೋದು ಆತಂಕಕಾರಿ ಸಂಗತಿಯೇ ಸರಿ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv