’ಅಪರಾಧಿಗಳನ್ನು ಬಿಡುಗಡೆ ಮಾಡಿ, ಸಿಎಂ ಕುಮಾರಸ್ವಾಮಿ ಯಾವ ಸಂದೇಶ ನೀಡುತ್ತಿದ್ದಾರೆ’

ಮಂಗಳೂರು: ಚುನಾವಣೆ ಹೊತ್ತಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಪರಾಧಿಗಳನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ಈ ಮೂಲಕ ಸಿಎಂ ಕುಮಾರಸ್ವಾಮಿ ಜನರಿಗೆ ಯಾವ ಸಂದೇಶ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರರಾದ ಚಿತ್ರನಟಿ ಮಾಳವಿಕಾ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ 1971ರಲ್ಲಿ ಗರೀಬಿ ಹಠಾವೋ ಘೋಷಣೆ ಮಾಡಿದ್ದರು. ಈಗ ಬಡತನ ನಿರ್ಮೂಲನೆಗೆಂದು ‘ನ್ಯಾಯ’ ಎಂಬ ಯೋಜನೆ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಈವರೆಗೂ ಕಾಂಗ್ರೆಸ್ ಬಡವರಿಗೆ ಮಾಡಿದ್ದು ಅನ್ಯಾಯವೇ..? ಅವರು ಪರೋಕ್ಷವಾಗಿ 70 ವರ್ಷಗಳಲ್ಲಿ ಅನ್ಯಾಯ ಮಾಡಿದ್ದೇವೆಂದು ಒಪ್ಪಿಕೊಂಡಿದ್ದಾರೆ. ಪ್ರಣಾಳಿಕೆಯಲ್ಲಿ 124ಎ ವಿಧಿ ರದ್ದುಪಡಿಸುವ ಭರವಸೆ ನೀಡಿದ್ದಾರೆ. ಇದರಿಂದ ಪ್ರತ್ಯೇಕತಾವಾದಿಗಳಿಗೆ ಕಾಂಗ್ರೆಸ್ ಬೆಂಬಲಿಸುವ ಸೂಚನೆ ನೀಡಿದೆ.

ಸಿದ್ದರಾಮಯ್ಯ ಸರಕಾರ ಇದ್ದಾಗ ಕರಾವಳಿಯಲ್ಲಿ ಕೊಲೆಗಳ ಸರಣಿ ನಡೆದಿತ್ತು. ಇದಕ್ಕೆ ಸಿದ್ದರಾಮಯ್ಯರ ಟಿಪ್ಪು ಪ್ರೇಮ, ಹಿಂದೂಗಳ ತಾತ್ಸಾರ ಭಾವನೆ ಕಾರಣವಾಗಿತ್ತು. ಆದರೆ ಸರಕಾರ ಬದಲಾದರೂ ಹಿಂದೂಗಳ ಮಲತಾಯಿ ಧೋರಣೆ ಬದಲಾಗಿಲ್ಲ. ಉಳಾಯಿಬೆಟ್ಟು ಕೋಮುಗಲಭೆ ಪ್ರಕರಣದಲ್ಲಿ ಆರೋಪಿಗಳ ಬಿಡುಗಡೆಗೆ ಮುಂದಾಗಿದೆ. ತಾಯಿ, ಮಗಳ ಮೇಲಿನ ಹಲ್ಲೆ ಪ್ರಕರಣವನ್ನು ಸರಕಾರ ಕ್ಷುಲ್ಲಕವಾಗಿ ನೋಡುತ್ತಿದೆಯೇ?ಈ ಮೂಲಕ ಸಿಎಂ ಕುಮಾರಸ್ವಾಮಿ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದನ್ನು ತೋರಿಸುತ್ತಿದೆ. ಸದ್ಯಕ್ಕೆ ಸರಕಾರದ ನಿರ್ಧಾರಕ್ಕೆ ಕೋರ್ಟ್ ತಡೆ ನೀಡಿದ್ದನ್ನು ಸ್ವಾಗತಿಸುತ್ತೇವೆ. ಆದ್ರೆ ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್, ಜನರಿಗೆ ಉತ್ತರ ನೀಡಬೇಕಾಗಿದೆ ಎಂದು ಇದೆ ವೇಳೆ ಮಾಳವಿಕಾ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv