ಮಹದಾಯಿ ಹೋರಾಟ, ಸಾಲ ಮನ್ನಾ: ಹೋರಾಟ ತೀವ್ರ

ಹುಬ್ಬಳ್ಳಿ: ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಮಹದಾಯಿ ವಿವಾದ ಕುರಿತು ಸರ್ವ ಪಕ್ಷ ಸಭೆ ಕರೆಯುವಂತೆ ಆಗ್ರಹಿಸಿ ಮಹದಾಯಿ ಹೋರಾಟಗಾರರು ಇಂದು ಬೆಂಗಳೂರು ಚಲೋ ಕೈಗೊಂಡಿದ್ದಾರೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟ ರೈತರು, ನಗರದ ಸಂಗೊಳ್ಳಿ ರಾಯಣ್ಣ ವೃತದಿಂದ ರೈಲ್ವೆ ನಿಲ್ದಾಣದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಮಹದಾಯಿ ಕಳಸಾ ಬಂಡೂರಿ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವ ರೈತರು ಇಂದು ಹುಬ್ಬಳ್ಳಿಯಿಂದ ರೈಲ್ವೆ ಮೂಲಕ ಬೆಂಗಳೂರು ತಲುಪಲಿದ್ದು, ನಾಳೆ ಬೆಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.
ಇದೇ ವೇಳೆ ಮಾತನಾಡಿದ ಕಳಸಾ ಬಂಡೂರಿ ಹೋರಾಟಗಾರರ ಮುಖಂಡ ಸುಭಾಷ್‌ಚಂದ್ರ ಗೌಡ ಮಾತನಾಡಿ, ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಹಾಗೂ ಮಹದಾಯಿ ಯೋಜನೆ ಅನುಷ್ಠಾನ ವಿಚಾರ ಕುರಿತು ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಮಹದಾಯಿ ಅಚ್ಚುಕಟ್ಟು ಪ್ರದೇಶದ ಒಂಬತ್ತು ತಾಲೂಕಿನ ರೈತ ಮುಖಂಡರು ಬೆಂಗಳೂರು ಚಲೋದಲ್ಲಿ ಭಾಗವಹಿಸಿದ್ದಾರೆ. ಮುಖ್ಯಮಂತ್ರಿಗಳು ₹2 ಲಕ್ಷದವರೆಗೆ ಮಾತ್ರ ಸಾಲಮನ್ನಾ ಮಾಡಿದ್ದಾರೆ. ಇದು ನಮಗೆ ಬೇಕಾಗಿಲ್ಲ. ಸಂಪೂರ್ಣ ಸಾಲಮನ್ನಾ ಆಗಬೇಕು. ನಾಳೆ ಬೆಂಗಳೂರು ತಲುಪಿ, ಅಲ್ಲಿ ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡುತ್ತೇವೆ ಅಂತಾ ಸುಭಾಷ್‌ಚಂದ್ರ ಗೌಡ ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv