ಬೆಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣ: ಆರೋಪಿ ಇಂದು ಕೋರ್ಟ್‌ಗೆ ಹಾಜರು

ಬೆಂಗಳೂರು: ಕೊನೆಗೂ ಹತ್ತು ವರ್ಷಗಳ ಬಳಿಕ ಮಡಿವಾಳ ಬಾಂಬ್​ ಸ್ಫೋಟ ಪ್ರಕರಣದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿ ಸಲೀಂ(45) ನಿನ್ನೆ ಕೇರಳದ ಹಳ್ಳಿಯೊಂದರಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇರಳದಲ್ಲಿ ತಲೆಮರೆಸಿಕೊಂಡ ಮಾಹಿತಿ ಪಡೆದ ಸಿಸಿಬಿ ತಂಡ ನಿನ್ನೆ ಆರೋಪಿ ಸಲೀಂನನ್ನು ಬಂಧಿಸಿದೆ. ಆರೋಪಿಯನ್ನು ಬೆಂಗಳೂರಿಗೆ ಕರೆ ತರಲಾಗಿದ್ದು, ಇಂದು ಕೋರ್ಟ್​ಗೆ ಹಾಜರುಪಡಿಸಲಿದೆ.

ಏನಿದು ಪ್ರಕರಣ?
2008 ರಲ್ಲಿ ನಗರದ ಮಡಿವಾಳ, ಚಿನ್ನಸ್ವಾಮಿ ಸ್ಟೇಡಿಯಂ ಸೇರಿದಂತೆ ಹಲವು ಕಡೆ ಸರಣಿ ಬಾಂಬ್ ಇಡಲಾಗಿತ್ತು. ಮಡಿವಾಳದಲ್ಲಿ ಬಾಂಬ್ ಬ್ಲಾಸ್ಟ್ ಆಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಬಳಿಕ ಬಾಂಬ್ ಸ್ಫೋಟದ ರೂವಾರಿ ಮದನಿಯನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಲೀಂನನ್ನು ಬಂಧಿಸಲಾಗಿತ್ತು. ಬಳಿಕ ಆತ ಜಾಮೀನು ಪಡೆದು ಹೊರಬಂದು ಕೋರ್ಟ್​ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ವಿಚಾರಣೆಗೆ ಹಾಜರಾಗದ ಈತನ ವಿರುದ್ಧ ಕೋರ್ಟ್​ ವಾರೆಂಟ್​​ ಹೊರಡಿಸಿತ್ತು. ವಾರೆಂಟ್​​ ಜಾರಿಯಾದ ಹಿನ್ನೆಲೆಯಲ್ಲಿ ಸಿಸಿಬಿ ಎಸಿಪಿ ಪಿ.ಟಿ ಸುಬ್ರಹ್ಮಣ್ಯ ಮತ್ತು ಪಿಎಸ್​​ಐ ಪ್ರವೀಣ್ ನೇತೃತ್ವದಲ್ಲಿ ಆರೋಪಿಗಾಗಿ ಶೋಧ ನಡೆಸಲಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv