ಸಮಯಕ್ಕೆ ಸರಿಯಾಗಿ ಎಂಟ್ರಿ ಕೊಟ್ಟು ಪ್ರಾಣ ಉಳಿಸಿದ ಪೊಲೀಸ್ರು..!

ಕೊಡಗು: ಇತ್ತೀಚಿನ ದಿನಗಳಲ್ಲಿ ಯಾರಾದರೂ ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದು ಸಹಾಯಕ್ಕೆ ಅಂಗಲಾಚುತ್ತಿದ್ರೆ, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡೋದನ್ನ ಬಿಟ್ಟು ಮೊಬೈಲ್​ನಲ್ಲಿ ಆ ದೃಶ್ಯವನ್ನ ಸೆರೆ ಹಿಡಿಯುವರೇ ಹೆಚ್ಚು. ಆದರೆ ಮಡಿಕೇರಿಯಲ್ಲಿ ನಡೆದ ಈ ಪ್ರಕರಣ ನಿಜಕ್ಕೂ ಮಾನವೀಯತೆ ನಮ್ಮಲ್ಲಿ ಇನ್ನೂ ಉಳಿದಿದೆ ಅನ್ನೋದನ್ನ ಸಾಬೀತುಪಡಿಸಿದೆ.
ಇಂದು ಸಂಜೆ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಸಮೀಪ ಭಾರೀ ಮಳೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ರಕ್ತದ ಮಡುವಿನಲ್ಲಿ ಬಿದ್ದಿದರು. ತಲೆಗೆ ತೀವ್ರ ಪೆಟ್ಟಾಗಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವ ಆಗಿ ಪ್ರಜ್ಞೆ ತಪ್ಪಿದ್ದರು. ಆದರೂ ಸಹ ಯಾರೂ ಅವರ ನೆರವಿಗೆ ಧಾವಿಸಿರಲಿಲ್ಲ. ಆದರೆ, ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರೋ ವಿಚಾರ ತಿಳಿದು ಸಂಚಾರಿ ಪೊಲೀಸರು ಮಿಂಚಿನ ವೇಗದಲ್ಲಿ ಧಾವಿಸಿ, ಅವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ವೇಳೆ ಸಂಚಾರಿ ಪೊಲೀಸ್ ಪೇದೆಗಳಾದ ಸಂತೋಷ್ ಹಾಗೂ ಕುಮಾರ್ ಕೂಡಲೇ ಸ್ಪಂದಿಸಿದ್ದರಿಂದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಒಂದು ವೇಳೆ ಆ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸೋದು ಸ್ವಲ್ಪ ತಡವಾಗಿದ್ರೂ ಅತಿಯಾದ ರಕ್ತ ಸ್ರಾವದಿಂದ ಆ ವ್ಯಕ್ತಿ ಬದುಕುವ ಸಾಧ್ಯತೆ ತುಂಬಾ ಕಡಿಮೆಯಿತ್ತು ಅಂತ ವೈದ್ಯರು ತಿಳಿಸಿದ್ರು.
ಗಾಯಾಳು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಮುಳ್ಳೇರಿಯ ಗ್ರಾಮದ ಶ್ರೀನಿವಾಸ್ ಎಂಬುದು ತಿಳಿದು ಬಂದಿದೆ. ಪೇದೆ ಸಂತೋಷ್ ಕೆಲವು ದಿನದ ಹಿಂದೆ ಬಸ್ ನಿಲ್ದಾಣದಲ್ಲಿ ಬಿದ್ದು ಸಿಕ್ಕಿದ್ದ ಪರ್ಸ್ ಹಾಗೂ ಎಟಿಎಂ ಪೌಚ್ ಅನ್ನು ವಾರಸುದಾರರಿಗೆ ಮರಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv