ಅಪ್ಪ-ಮಗ ಹೋರಾಟ ಮಾಡುವ ಅರ್ಹತೆ ಕಳೆದುಕೊಂಡಿದ್ದಾರೆ -ಮಧು ಬಂಗಾರಪ್ಪ

ಶಿವಮೊಗ್ಗ: ಯಡಿಯೂರಪ್ಪ ಮತ್ತು ರಾಘವೇಂದ್ರರವರು ಹೋರಾಟ ಮಾಡುವಂತಹ ಅರ್ಹತೆ ಕಳೆದುಕೊಂಡಿದ್ದಾರೆ ಅಂತಾ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲೀ ತನಕ ನಾನು ಸುಮ್ಮನಿದ್ದೆ. ಆದರೆ ಇದೀಗ ಮತದಾನ ಮುಗಿದಿರುವುದರಿಂದ ಇನ್ನು ಮಾತನಾಡುತ್ತೇನೆ. ಕುಮಾರಸ್ವಾಮಿ ಸರ್ಕಾರ ಬೀಳಿಸುವ ಯಡಿಯೂರಪ್ಪ ಅವರ ಕನಸು ಈಡೇರುವುದಿಲ್ಲ. ಆದರೆ ಮೇ 23ರ ನಂತರ ಮೋದಿ ಸರ್ಕಾರ ಬೀಳುತ್ತದೆ. ನನ್ನ ಗೆಲುವಿಗೆ ಕೆಲವು ಬಿಜೆಪಿ ಮುಖಂಡರು ಸಹಕಾರ ನೀಡಿದ್ದು ಅದು ನನಗೆ ಅನುಕೂಲವಾಗಿದೆ. ಈ ಚುನಾವಣೆ ಕಾಂಗ್ರೆಸ್, ಜೆಡಿಎಸ್ ಮತ್ತು ಜನರ ಚುನಾವಣೆಯಾಗಿದ್ದು ಅದರ ಫಲ ಸಿಗಲಿದೆ. ಜನರು ಬದಲಾವಣೆಗಳನ್ನು ದೊಡ್ಡ ಮಟ್ಟದಲ್ಲಿ ಬಯಸಿರುವುದು ಕಂಡು ಬಂದಿದೆ. ಚುನಾವಣೆ ಫಲಿತಾಂಶಕ್ಕೂ ಮೊದಲು ಜನ ಸರ್ಕಾರದ ವತಿಯಿಂದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಜಿಲ್ಲೆಯಲ್ಲಿ ಅಗತ್ಯವಾಗಿ ಆಗಬೇಕಿರುವ ಕೆಲಸದ ಬಗ್ಗೆ ಗಮನ ಹರಿಸಲಾಗುವುದು ಅಂತಾ ಹೇಳಿದರು.

ಇದೇ ವೇಳೆ, ಬಿಜೆಪಿಯವರು ಸಾಕಷ್ಟು ಅಪ ಪ್ರಚಾರ ಮಾಡಿದ್ದಾರೆ. ಅವರಿಗೆ ಮಧು ಬಂಗಾರಪ್ಪ ಬಿಟ್ಟು ಬೇರೇನೂ ವಿಷಯವೇ ಇರಲಿಲ್ಲ. ಅವರಲ್ಲಿ ಕುಮಾರ್ ಬಂಗಾರಪ್ಪ ಅಂತಾ ಒಳ್ಳೆಯ ವಕ್ತಾರ ಇದ್ದಾರೆ. ಆದ್ರೆ ಅವರೆಲ್ಲ ಎಷ್ಟೇ ಅಪಪ್ರಚಾರ ಮಾಡಿದ್ದರೂ ಜನರು ಅದಕ್ಕೆ ಗಮನ ನೀಡಿಲ್ಲ. ಇದರ ನಡುವೆಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಬಾರಿ ಒಂದಾಗಿ ಚುನಾವಣೆ ಎದುರಿಸಿವೆ. ಇದಕ್ಕಾಗಿ ಎರಡೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೂ ಒಂದಾಗಿ ಕೆಲಸ ಮಾಡಿದ್ದಾರೆ ಅಂತಾ ಹೇಳಿದರು.