‘ಮಾಯದಂತ ಕಳೆ ಬಂತಣ್ಣ.. ಮದಗದ ಕೆರೆಗೆ’

ಹಾವೇರಿ: ‘ಮಾಯದಂತ ಮಳೆ ಬಂತಣ್ಣ.. ಮದಗದ ಕೆರೆಗೆ’.. ಈ ಜನಪದ ಗೀತೆಯನ್ನು ಬಹಳ ಮಂದಿ ಕೇಳಿರಬಹುದು. ಅಂದಾಗೇ ಮದಗದ ಕೆರೆ ಅನ್ನೋ ಜನಪದ ಸಾಹಿತ್ಯದ ತಾಣ ಇರೋದು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮಾಸೂರಿನಲ್ಲಿ. ಇತಿಹಾಸ ಪ್ರಸಿದ್ಧ ಮದಗ ಮಾಸೂರು ಕೆರೆ ಕೆಲ ವರ್ಷಗಳಿಂದ ತನ್ನ ಮಹತ್ವ ಕಳೆದುಕೊಂಡಿತ್ತು. ಇದೀಗ ಕೆರೆ ಮತ್ತು ಸುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗಿತ್ತು, ಹೊಸ ಕಳೆ ಪಡೆದುಕೊಂಡಿದೆ. ಮತ್ತೆ ತನ್ನ ಗತ ವೈಭವವನ್ನು ಮೈದಳೆದುಕೊಂಡಿದೆ.

ಮದಗ ಮಾಸೂರು ಕೆರೆ ನೈಸರ್ಗಿಕ ಪ್ರವಾಸಿ ತಾಣ ಮತ್ತು ಉದ್ಯಾನವನವನ್ನು ಇತ್ತೀಚೆಗೆ ಅಭಿವೃದ್ಧಿ ಪಡಿಸಲಾಗಿದ್ದು ಮದಗದ ಗತ ವೈಭವವನ್ನು ಮತ್ತೆ ನೆನಪಿಸುತ್ತಿದೆ. ಪ್ರಸಿದ್ಧ ಕೆಂಚಮ್ಮ ತಾಯಿಯ ಮದಗ ಕೆರೆ ಎತ್ತರದ ಗುಡ್ಡ ಪ್ರದೇಶಗಳಿಂದ ಕೂಡಿದ್ದು, ವಿಶಾಲವಾದ ನೈಸರ್ಗಿಕ ಅರಣ್ಯ ಪ್ರದೇಶವನ್ನು ಹೊಂದಿದೆ. ಆದ್ರೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇತ್ತೀಚಿನವರ್ಷಗಳಲ್ಲಿ ಕೆರೆ ಹಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಅಲ್ಲದೇ ಸಾವಿರಾರು ಎಕರೆ ಜಾಗದಲ್ಲಿದ್ದ ಕೆರೆ ಒತ್ತುವರಿದಾರರ ದಾಳಿಗೆ ಒಳಪಟ್ಟು ಇಂದು 200ರಿಂದ 300 ಏಕರೆಯಷ್ಟಾಗಿದೆ. ಅದೃಷ್ಟವಶಾತ್​​ ಈ ಬಗ್ಗೆ ಅರಣ್ಯ ಇಲಾಖೆ ಬೇಗ ಎಚ್ಚೆತ್ತು ಕೆರೆ ಗುಡ್ಡದ ಮೇಲಿರುವ 25 ಎಕರೆಯಲ್ಲಿ 88 ಲಕ್ಷ ರೂ ಖರ್ಚು ಮಾಡಿ ಮದಗ ಮಾಸೂರು ಪ್ರದೇಶವನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ದಿಪಡಿಸಿದೆ.
ಬ್ರಿಟೀಷರ ಕೊಡುಗೆ : ಬ್ರಿಟೀಷರ ಆಳ್ವಿಕೆಯಲ್ಲಿ ನಿರ್ಮಿಸಿದ ಬೃಹತ್ ಕೆರೆ ಇದು. ಕೆರೆಯ ಸುತ್ತಲು ದೊಡ್ಡ ದೊಡ್ಡ ಬೆಟ್ಟ ಗುಡ್ಡಗಳು ಸಾಲು ಸಾಲಾಗಿ ಹಸಿರು ಹೊದ್ದು ಮಲಗಿವೆ. ಇಂತಹ ಸುಂದರ ತಾಣದಲ್ಲಿ ಬ್ರಿಟೀಷರು ಈ ಭಾಗದ ರೈತರಿಗಾಗಿ ಬೃಹತ್ ಕೆರೆ ನಿರ್ಮಿಸಿದ್ದರು. ತದನಂತರ ಮಾಸೂರಿನ ಮಲ್ಲನಗೌಡರು ಕೆರೆಯನ್ನು ಪುನರ್ ನಿರ್ಮಾಣ ಮಾಡಿದ್ದರು ಎನ್ನುವ ಪ್ರತೀತಿ ಇದೆ.
ಪ್ರವಾಸಿ ತಾಣ : ಇಲ್ಲಿ ಬೃಹತ್ ಕೆರೆ ಹಾಗೂ ನೈಸರ್ಗಿಕವಾಗಿ ಬೆಳೆದು ನಿಂತ ಗಿಡ ಮರ, ಸುತ್ತಲೂ ಎತ್ತರದ ಗುಡ್ಡಗಾಡು ಪ್ರದೇಶ ಹಾಗೂ ಕೋಟೆ ಕೊತ್ತಲಗಳು ಕಾಣಸಿಗುತ್ತವೆ. ಮಳೆಗಾಲದಲ್ಲಿ ಸುಮಾರು 30 ಅಡಿ ಎತ್ತರದಿಂದ ನೀರು ಧುಮುಕುವ ಜಲಪಾತವಿದ್ದು, ಇಲ್ಲಿನ ದೃಶ್ಯ ರಮಣೀಯವಾಗಿರುತ್ತದೆ. ಹಬ್ಬಹರಿ ದಿನಗಳು ಬಂದಿತೆಂದರೆ ಸಾಕು ಸುತ್ತಮುತ್ತಲ ಜಿಲ್ಲೆಗಳಲ್ಲದೆ ರಾಜ್ಯದ ವಿವಿಧೆಡೆಯಿಂದಲು ಪ್ರವಾಸಿಗರು ಹಾಗೂ ಜನರು ಇಲ್ಲಿಗೆ ಬರುತ್ತಾರೆ. ಗುಡ್ಡದ ಒಂದು ತುದಿಯಲ್ಲಿ ಕಲ್ಲು ಬಂಡೆಗಳ ಮಧ್ಯ ಶ್ರೀ ಈಶ್ವರ ಮೂರ್ತಿ ಹಾಗೂ ಶ್ರೀನಿವಾಸ ಮೂರ್ತಿಗಳ ಶಿಲ್ಪಗಳು ಇವೆ. ಹೀಗಾಗಿ ಪ್ರವಾಸಿಗರನ್ನು ಇನ್ನಷ್ಟು ಸೆಳೆಯುವಂತಾಗಲು ಇಲ್ಲಿ ಅನೇಕ ಮೂಲ ಸೌಲಭ್ಯಗಳನ್ನು ಸಹ ಇತ್ತಿಚಿಗೆ ನಿರ್ಮಿಸಲಾಗಿದೆ.
ಸುಂದರ ಉದ್ಯಾನವನ: ಈ ಹಿಂದೆ ನಿರ್ಮಿಸಿದ್ದ ಉದ್ಯಾನವನ ಕಿಡಿಗೇಡಿಗಳ ಕೃತ್ಯಕ್ಕೆ ಸಿಲುಕಿ ಸಂಪೂರ್ಣ ನಾಶವಾಗಿ ಹೋಗಿತ್ತು. ಆದರೆ ಅರಣ್ಯ ಇಲಾಖೆ ಮತ್ತೆ ಆಸಕ್ತಿ ವಹಿಸಿ ಸುಂದರ ಉದ್ಯಾನವನ ನಿರ್ಮಾಣಮಾಡಿದ್ದು, ಸಾಲು ಮರದ ತಿಮ್ಮಕ್ಕ ಸಸ್ಯೊದ್ಯಾಮ ಎಂದು ಹೆಸರಿಡಲಾಗಿದೆ. ಉದ್ಯಾನದಲ್ಲಿ ಸುಂದರ ಗಿಡ, ಮರಗಳು, ಮಕ್ಕಳ ಆಟಿಕೆ ಸಮಾನುಗಳು ಇರುವುದರಿಂದ ಈ ಭಾಗದ ಜನರಿಗೆ ಬೇಸಿಗೆ ರಜೆಯ ಮುಖ್ಯ ಪ್ರವಾಸಿ ತಾಣವಾಗಿದೆ.