ಬೈಕ್​ಗೆ ಲಾರಿ ಡಿಕ್ಕಿ : ಮೂವರು ಬೈಕ್ ಸವಾರರ ಸಾವು

ನೆಲಮಂಗಲ: ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಮೃಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ವೀರನಂಜೀಪುರ ಗ್ರಾಮದ ಬಳಿ ನಡೆದಿದೆ. ಒಂದೇ ಬೈಕ್​ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಹಿಂಬದಿಯಲ್ಲಿ ಕುಳಿತಿದ್ದ ವಿಶಾಲ್ ಹಾಗೂ ಶಶಿಧರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಾಲನೆ ಮಾಡ್ತಿದ್ದ ಆನಂದಪ್ಪ ತಲೆಗೆ ಗಂಭೀರ ಗಾಯವಾಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆತ ಕೂಡ ಮೃತಪಟ್ಟಿದ್ದಾನೆ.

ಮೃತರು ಹನುಮಂತಪುರ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ಮೂವರು ತಮ್ಮ ಬೈಕ್​ನಲ್ಲಿ ತುಮಕೂರು ಕಡೆಯಿಂದ ನೆಲಮಂಗಲ ಮಾರ್ಗವಾಗಿ ಪಟ್ಟಣದ ಕವಾಡಿ ಮಠದಲ್ಲಿ ಸಂಬಂಧಿಕರ ಮದುವೆಗೆ ಹೋಗುತ್ತಿದ್ದರು. ಈ ವೇಳೆ ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಘಟನೆ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *