ಪಾಪ! ಅಮೆರಿಕದಲ್ಲಿ ಕೋಟ್ಯಧಿಪತಿಗಳ ಗೋಳು ಯಾರಿಗೂ ಬೇಡ!

ಅಮೆರಿಕದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಜೊತೆಗೆ ಅವರ ಆಯಸ್ಸೂ ಸಹ ಹೆಚ್ಚಾಗುತ್ತಲೇ ಇದೆ. ಹೌದು, ಅಮೆರಿಕದಲ್ಲಿ ಕೋಟ್ಯಧಿಪತಿಗಳು ದೀರ್ಘ ಕಾಲ ಬಾಳುತ್ತಿದ್ದಾರೆ! ಅವರ ದುಡ್ಡು, ಅವರ ಜೀವನ, ಅವರ ಆಯಸ್ಸು ಬಾಳಲಿ ಬಿಡಿ ಎಂದು ಕೊಂಕು ತೆಗೆಯಬಹುದು. ಆದ್ರೆ ಹೀಗೆ ಹೆಚ್ಚು ಕಾಲ ಬಾಳುವ ಮೂಲಕ ಅವರು ಮುಂದಿನ ಪೀಳಿಗೆಗೆ ತೊಡಕಾಗಿ ಪರಿಣಮಿಸಿದ್ದಾರೆ.

ದೀರ್ಘಾಯಸ್ಸು, ಆಸ್ತಿಯೇ ದೊಡ್ಡ ಕಂಟಕವಾಗ್ತಿದೆ
ಅಪ್ಪ-ಅಮ್ಮ ಕೂಡಿಟ್ಟ ಕಾಸನ್ನು ಎಂಜಾಯ್ ಮಾಡೋಣ ಅಂದ್ರೆ ಅವರಿನ್ನೂ ಬದುಕಿದ್ದು, ಸೊತ್ತು ನಮ್ಮ ಕೈ ಸೇರುತ್ತಿಲ್ಲ. ನಾವೂ ಜೀವನ ಅನುಭವಿಸಲು ಆಗುತ್ತಿಲ್ಲ ಎಂದು ಕೋಟ್ಯಧಿಪತಿಗಳ ಮಕ್ಕಳು ಗೋಳು ತೋಡಿಕೊಳ್ಳುತ್ತಿದ್ದಾರೆ! ಹೀಗೆ ಕೋಟ್ಯಧಿಪತಿಗಳು ದೀರ್ಘಕಾಲ ಬಾಳುವುದರಿಂದ ಪರಿಸ್ಥಿತಿ ಹೇಗಾಗಿದೆಯೆಂದ್ರೆ ಸಾಮಾನ್ಯವಾಗಿ ಉತ್ತರಾಧಿಕಾರಿಗಳು ಅಂದ್ರೆ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಅಂತಾ ಇರುತ್ತಾರೆ. ಆದ್ರೆ ಈಗಿನ ಕೋಟ್ಯಧಿಪತಿಗಳು ದೀರ್ಘಕಾಲ ಬಾಳುತ್ತಿರುವುದರಿಂದ ಉತ್ತರಾಧಿಕಾರಿಗಳು ಮರಿಮೊಮ್ಮಕ್ಕಳಷ್ಟೇ ಅಲ್ಲಾ.. ಇನ್ನೂ ಮುಂದಿನ ಪೀಳಿಗೆಗೆ ಮರಿಮರಿಮರಿಮೊಮ್ಮಕ್ಕಳವರೆಗೂ ವಿಸ್ತರಿಸುತ್ತಿದೆ. ಕೆಲವೊಮ್ಮೆ ಆ ಮರಿ-ಮರಿ-ಮರಿ-ಮೊಮ್ಮಕ್ಕಳು ಯಾರು ಎಂಬುದೂ ಈ ಕೋಟ್ಯಧಿಪತಿಗಳ ಗಮನಕ್ಕೆ ಬಂದಿರುವುದಿಲ್ಲವಂತೆ! ಆಸ್ತಿಗಾಗಿ ಕಿತ್ತಾಡುವುದಕ್ಕೆ ಇದು ದೊಡ್ಡ ತೊಡಕಾಗಿ ಪರಿಣಮಿಸಿದೆ. ಇನ್ನು ನಾಲ್ಕಾರು ದಶಕಗಳ ಹಿಂದೆ ಈ ಕೋಟ್ಯಧಿಪತಿಗಳು ಗಳಿಸಿದ್ದ ಆಸ್ತಿಪಾಸ್ತಿಯ ಮೌಲ್ಯ ಇತ್ತೀಚೆಗೆ ಭಾರಿ ಮೊತ್ತದ್ದಾಗುತ್ತಿದೆ. ಇದೂ ಸಹ ವಯಸ್ಸಾದ ಕೋಟ್ಯಧಿಪತಿಗಳಿಗೆ ತಲೆಬಿಸಿಯಾಗಿ ಪರಿಣಮಿಸಿದೆ.

ಅಮೆರಿಕದಲ್ಲಿ ಕೋಟ್ಯಧಿಪತಿಗಳ ಕಲರವ! ಉತ್ತರ ಅಮೆರಿಕದಲ್ಲಿ 2010ರಲ್ಲಿ 490 ಮಂದಿ ಕೋಟ್ಯಧಿಪತಿಗಳಿದ್ದರು. ಅವರ ಸಂಖ್ಯೆ 2017ಕ್ಕೆ 747ಕ್ಕೆ ತಲುಪಿದೆ. ನ್ಯೂ ಓರಲಿಯಾನ್ಸ್​ ಪ್ರಾಂತ್ಯದ ಟಾಮ್​ ಬೆನ್ಸನ್​​ ಎಂಬ ವ್ಯಕ್ತಿ ಕಳೆದ ವರ್ಷ ತಮ್ಮ 90ನೇ ವಯಸ್ಸಿನಲ್ಲಿ ಮೃತಪಟ್ಟರು. ಆಗ ಅವರು ಬಿಟ್ಟು ಹೋದ ಆಸ್ತಿ ಅಂದ್ರೆ ದೊಡ್ಡ ಬಂಗಲೆ, ಎರಡು ವೃತ್ತಿಪರ ಕ್ರೀಡಾ ತಂಡಗಳು ಮತ್ತು ಕಾರ್​ ಡೀಲರ್​ಶಿಪ್​​ ಸಮೂಹ ಸಂಸ್ಥೆ. ಆದ್ರೆ ಇವರು ತಮ್ಮ ಕೊನೆಗಾಲದಲ್ಲಿ ಶಾಂತ ಜೀವನ ನಡೆಸಲಿಲ್ಲ. ಉತ್ತರಾಧಿಕಾರಿಗಳು ಬೆನ್ಸನ್​​ ಅಪಾರ ಆಸ್ತಿಗಾಗಿ ಸಿಕ್ಕಾಪಟ್ಟೆ ಕಚ್ಚಾಟ ನಡೆಸಿದ್ದರು. ಅವರ ಪುತ್ರಿ ಮತ್ತು ಇಬ್ಬರು ಮೊಮ್ಮಕ್ಕಳು ಬೆನ್ಸನ್​ರ ಮೂರನೆ ಪತ್ನಿ, 72 ವರ್ಷದ ಗೇಯ್ಲ್ ​ಬೆನ್ಸನ್ ವಿರುದ್ಧ ಯುದ್ಧವನ್ನೇ ಸಾರಿದ್ದರು. ಅಪ್ಪ ಬೆನ್ಸನ್, ಗೇಯ್ಲ್ ಹೇಳಿದಂತೆ ಕುಣಿಯುತ್ತಿದ್ದಾರೆ, ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದರು. ಕೊನೆಗೆ ಉತ್ತರಾಧಿಕಾರಿಗಳು ತಮ್ಮ ತಮ್ಮ ಪಾಲನ್ನು ಗಳಿಸಿಕೊಳ್ಳುವಲ್ಲಿ ಭಾರಿ ಹಣ ಖರ್ಚು ಮಾಡಿದ್ದರು.

ಸೂಪರ್​ ರಿಚ್​​ಗಳ ಕತೆ-ವ್ಯಥೆ!
ಇದು ವಯಸ್ಸಾದ ಅನೇಕ ಕೋಟ್ಯಧಿಪತಿಗಳ ಕತೆ-ವ್ಯಥೆ. ಅಮೆರಿಕಾದಲ್ಲಿ ಕಳೆದ ವರ್ಷ 15 ಮಂದಿ ದೀರ್ಘಾಯಸ್ಸಿನ ಬಳಿಕ ಅಸುನೀಗಿದ್ದರು. ಅವರುಗಳು ಬಿಟ್ಟುಹೋದ ಆಸ್ತಿಯ ಮೊತ್ತ ಅಂದಾಜು 60 ಶತಕೋಟಿ ಡಾಲರ್​! ಅಂದ್ರೆ 6,000 ಕೋಟಿ ರೂಪಾಯಿ! ಅಪಾರ ವ್ಯಾಪಾರ ವಹಿವಾಟುಗಳು, ಆಸ್ತಿಪಾಸ್ತಿಗಳು, ಕ್ರೀಡಾ ತಂಡಗಳು, ಯಾಚ್​​ಗಳು, ವಿಮಾನಗಳು ಹೀಗೆ ಇನ್ನೂ ಏನೇನೋ ಕೋಟ್ಯಂತರ ಡಾಲರ್​ ಮೌಲ್ಯದ ಆಸ್ತಿಗಳನ್ನು ಅವರು ಬಿಟ್ಟುಹೋಗಿದ್ದಾರೆ.
ಉತ್ತರ ಅಮೆರಿಕದಲ್ಲಿ ಪರಿಸ್ಥಿತಿ ಹೇಗಿದೆಯೆಂದ್ರೆ ದೇಶದ ಒಟ್ಟಾರೆ ವೈಯಕ್ತಿಕ ಸಂಪತ್ತಿನಲ್ಲಿ ಶೇ. 37.2 ಭಾಗವು ಶೇ. 1 ರ ಪ್ರಮಾಣದಲ್ಲಿರುವ ಈ ಕೋಟ್ಯಧಿಪತಿಗಳ ಸುಪರ್ದಿಯಲ್ಲಿವೆ. ಅದೇ ಶೇ. 50ರಷ್ಟು ಜನರ ಕೈಯಲ್ಲಿ ಏನೂ ಇಲ್ಲ ಎಂಬಂತಹ ಪರಿಸ್ಥಿತಿಯೂ ಇದೆ. ಈ ಧನಿಕರು ದಿನೇ ದಿನೇ ಹೆಚ್ಚು ಕಾಲ ಬಾಳುತ್ತಿರುವುದರ ಜೊತೆಗೆ ಹೆಚ್ಚು ಹೆಚ್ಚು ಸಂಪತ್ತನ್ನೂ ತಮ್ಮಲ್ಲೇ ಕ್ರೋಢೀಕರಿಸಿಕೊಳ್ಳುತ್ತಿದ್ದಾರೆ. ಇದು ಪರಿಸ್ಥಿತಿಯ ವ್ಯಂಗ್ಯವೇ ಸರಿ. ಇನ್ನೂ ವಿಚಿತ್ರವೆಂದ್ರೆ ಈ ಕೋಟ್ಯಧಿಪತಿಗಳು ಕಟ್ಟಬೇಕಾದ ತೆರಿಗೆ ಪ್ರಮಾಣವನ್ನು ಸರ್ಕಾರ ಕಾಲ ಕಾಲಕ್ಕೆ ತಗ್ಗಿಸುತ್ತಾ ಬಂದಿದೆ.

‘ಫ್ಯಾಮಿಲಿ ಬ್ರಾಂಚ್​​ಗಳು’

ಇನ್ನು ಮತ್ತೊಬ್ಬ ಸೂಪರ್​ ರಿಚಿರಿಚ್​​ 95 ವರ್ಷದ ಸಮ್ನರ್​ ರೆಡ್​ಸ್ಟೋನ್​​ಗೂ ಸಹ ಹೀಗೆಯೇ ತಮ್ಮ ಕೊನೆಗಾಲದಲ್ಲಿ ಶಾಂತ ಜೀವನ ನಡೆಸಲು ಸಾಧ್ಯವಾಗದೇ ಹೋಯಿತು. ಮೂರು ಶತಕೋಟಿ ಡಾಲರ್​ ಆಸ್ತಿಪಾಸ್ತಿಗಾಗಿ ಸಮ್ನರ್ ಮತ್ತು ಅವರ ಉತ್ತರಾಧಿಕಾರಿಗಳ ಮಧ್ಯೆ, ದೊಡ್ಡ ಕದನವೇ ನಡೆದುಹೋಯಿತು. ಇದರ ಲಾಭವನ್ನು ಈಗ ದೊಡ್ಡ ದೊಡ್ಡ ಬ್ಯಾಂಕುಗಳು ಪಡೆದುಕೊಳ್ಳುತ್ತಿವೆ. ಕೋಟ್ಯಧಿಪತಿಗಳು ಹೇಗೆ ತಮ್ಮ ಕುಟುಂಬದ ಬಿಳಿಲುಗಳನ್ನು ವಿಸ್ತರಿಸುತ್ತಾ ಹೋಗುತ್ತಾರೋ ಹಾಗೆಯೇ.. ಅನೇಕ ಬ್ಯಾಂಕ್​​ಗಳು ‘ಫ್ಯಾಮಿಲಿ ಬ್ರಾಂಚ್​​ಗಳನ್ನು’ ತೆರೆದುಕುಳಿತಿವೆ. ಕೋಟ್ಯಧಿಪತಿಗಳು ಗಿರಾಕಿಗಳಿಗೆ ವಿಶೇಷ ಸೇವೆಗಳು, ರಿಯಾಯಿತಿಗಳನ್ನು ನೀಡುತ್ತಾ ಅವರನ್ನು ತನ್ನತ್ತ ಸೆಳೆಯುತ್ತಿವೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv