14 ವರ್ಷ ಒಂಟಿತನದಿಂದ ಬೇಸತ್ತು ಸತ್ತ, ಅವನೊಂದಿಗೆ ಇಡೀ ಕುಲವೇ ಆಯ್ತು ಸರ್ವನಾಶ..!

ಜಗತ್ತಿನ ಏಕೈಕ ‘ಮರದ ಬಸವನ ಹುಳು’ ಮೃತಪಟ್ಟಿದೆ. ಏನಪ್ಪಾ ಯಃಕಶ್ಚಿತ್​ ಬಸವನ ಹುಳು ಸತ್ರೂ ಅದೂ ಸುದ್ದಿ ಆಗ್ತಿದೆ ಎಂದು ಮೂಗುಮುರಿಯಬೇಡಿ. ಏಕೆಂದ್ರೆ ಸತ್ತಿದ್ದು ಬಸವನ ಹುಳುವೇ ಆದ್ರೂ ಈ ವಿಷಯ ಒಂದು ಕ್ಷಣ ನಿಮ್ಮನ್ನೂ ದು:ಖಿತರನ್ನಾಗಿಸುತ್ತೆ. ಈ ಬಸವನ ಹುಳು ಸತ್ತಿದ್ದೇ ಬಂತು ಅದರ ಇಡೀ ವಂಶಾವಳಿ, ಕುಲ ಈ ಭೂಮಿ ಮೇಲೆ ಇನ್ನಿಲ್ಲವಾಗಿದೆ.

ಹವಾಯಿ ದ್ವೀಪಗಳಲ್ಲಿ ಈ ಹಿಂದೆ ಸಾವಿರಾರು ವೈವಿಧ್ಯಮಯ ಜಾತಿಯ ಬಸವನ ಹುಳುಗಳು ಇದ್ದವು. ಆದ್ರೆ ಕಾಲಾಂತರದಲ್ಲಿ ಅವುಗಳಲ್ಲಿ ಹಲವು ನಾಶವಾಗುತ್ತಾ ಬಂದಿವೆ. ಮರದ ಬಸವನ ಹುಳು ಎಂಬ ವಿಶೇಷ ಪ್ರಭೇದದ ಬಸವನ ಹುಳು ಜೀವಂತವಾಗಿತ್ತು. ಜಾರ್ಜ್​ ಹೆಸರಿನ ಮರದ ಬಸವನ ಹುಳು 14 ವರ್ಷ ಕಾಲ ದೀರ್ಘವಾಗಿ ಬಾಳಿದ್ದು, ಹೊಸ ವರ್ಷದ ಮೊದಲ ದಿನ ನಿಧನ ಹೊಂದಿದೆ. ಜಾರ್ಜ್​ ಬಸವನ ಹುಳುವನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಸಾಕಲಾಗುತ್ತಿತ್ತು. ಏಕೆಂದ್ರೆ ಮರ ಬಸವನ ಹುಳು ಜಾತಿಯಲ್ಲಿ ಅದು ಕೊನೆಯ ಸಂತತಿಯಾಗಿತ್ತು. ಕುತೂಹಲಕಾರಿ ಸಂಗತಿಯೆಂದ್ರೆ ಇಲ್ಲಿನ ಜೈವಿಕ ಸಂಶೋಧಕರು ಹೇಗಾದ್ರೂ ಮಾಡಿ ಮರ ಜಾತಿಯ ಬಸವನ ಹುಳುವಿನ ಸಂತತಿಯನ್ನು ಮುಂದುವರಿಸಬೇಕು ಎಂದು ಅದಕ್ಕೆ ಸಂಗಾತಿಯನ್ನು ಹುಡುಕುತ್ತಿದ್ದರು. ಆದ್ರೆ 10 ವರ್ಷಗಳಿಗೂ ಹೆಚ್ಚು ಕಾಲದ ಅವರ ಪ್ರಯತ್ನ ವಿಫಲವಾಗಿತ್ತು. ಏಕೆಂದ್ರೆ ಸಂತಾನ ಅಭಿವೃದ್ಧಿಗಾಗಿ ಜಾರ್ಜ್​​ಗೆ ಸಂಗಾತಿಯೇ ದೊರೆತಿರಲಿಲ್ಲ. ಜಾರ್ಜ್​ ಕೇವಲ ಒಂದು ಬಸವನ ಹುಳು ಅಂತ ಆಗಿರಲಿಲ್ಲ. ಅದು ಜೀವಶಾಸ್ತ್ರಜ್ಙರಿಗೆ ಇಡೀ ಬಸವನ ಹುಳು ಲೋಕವನ್ನೇ ಪ್ರತಿನಿಧಿಸುವಂತಿತ್ತು.