ಮ್ಯಾಡಮ್​ ಟುಸ್ಸಾಡ್ಸ್​​ನಲ್ಲಿ ಬರಲಿದೆ ಬಾಬಾ ರಾಮ್​ದೇವ್ ಮೇಣದ ಪ್ರತಿಮೆ ​​

ಲಂಡನ್​​: 250 ವರ್ಷಗಳಿಂದ ಲಂಡನ್​​​ನ ಮ್ಯಾಡಮ್ ಟುಸ್ಸಾಡ್ಸ್​​ನಲ್ಲಿ ಪ್ರಸಿದ್ಧ ವ್ಯಕ್ತಿಗಳ ಮೇಣದ ಮೂರ್ತಿಗಳನ್ನ ಇಟ್ಟು ಪ್ರವಾಸಿಗರನ್ನ ಆಕರ್ಷಿಸುತ್ತಾ ಬಂದಿದೆ. ಭಾರತದಿಂದಲೂ ಕೂಡ ಅಮಿತಾಬ್​​ ಬಚ್ಚನ್​​, ಐಶ್ವರ್ಯ ರೈ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ಈ ಮ್ಯೂಸಿಯಂನಲ್ಲಿ ಇಡಲಾಗಿದೆ. ಈಗ ಆ ಲಿಸ್ಟ್​​ಗೆ ಮತ್ತೊಂದು ಸೇರ್ಪಡೆ ಯೋಗ ಗುರು ಬಾಬಾ ರಾಮ್​ದೇವ್​​. ಯೋಗದ ಮೂಲಕ ವಿಶ್ವಕ್ಕೆ ಪರಿಚಯವಾದ ರಾಮ್​​ದೇವ್​​ ಅವರ ಮೇಣದ ಪ್ರತಿಮೆಯನ್ನ ಶೀಘ್ರದಲ್ಲೇ ಮ್ಯಾಡಮ್​ ಟುಸ್ಸಾಡ್ಸ್​​ನಲ್ಲಿ ಇಡಲಾಗುತ್ತ್ತದೆ.
ಮ್ಯೂಸಿಯಂನವರು 2 ತಿಂಗಳ ಹಿಂದೆ ಮೂರ್ತಿ ತಯಾರಿಸುವ ಕುರಿತು ಕೋರಿದ್ದರು. ಇದಕ್ಕೆ ನಾನು ಬೇಡ ಎಂದರೂ ನನ್ನ ಮನವೋಲಿಸಿ ಒಪ್ಪಿಸಿದ್ದಾರೆ ಎಂದು ಬಾಬಾ ರಾಮ್​ದೇವ್​​ ಹೇಳಿದ್ದಾರೆ. ಈ ಮೂಲಕ ರಾಮ್​​​​ದೇವ್​​​, ಸ್ವಾಮಿ ವಿವೇಕಾನಂದರ ನಂತರ ಮ್ಯಾಡಮ್​ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆ ರೂಪದಲ್ಲಿ ಪ್ರದರ್ಶನ ಕಾಣ್ತಿರೋ ಭಾರತದ 2ನೇ ಸಂತ ಎನಿಸಿಕೊಂಡಿದ್ದಾರೆ​. ಈ ಹಿಂದೆ ರಾಜ್​ಕೋಟ್​​ನ ಕಲಾವಿದರೊಬ್ಬರು ಬಾಬಾ ರಾಮ್​ದೇವ್​ ಅವರ ಮೇಣದ ಪ್ರತಿಮೆಯನ್ನು ಮಾಡಿ ತನ್ನ ಕೆಲಸವನ್ನು ಬಾಬಾ ರಾಮ್​ದೇವ್​ರಿಗೆ ಸಮರ್ಪಿಸಿದ್ದರು.
ಮ್ಯಾಡಮ್​ ಟುಸ್ಸಾಡ್ಸ್ ಮ್ಯೂಸಿಯಂ ಆರಂಭವಾದ 200 ವರ್ಷದಿಂದ, ಮನುಷ್ಯನಂತೆಯೇ ಕಾಣೋ ಮೇಣದ ಪ್ರತಿಮೆಗಳನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಫ್ರೆಂಚ್​ ಕ್ರಾಂತಿಯ ಬಳಿಕ ಲಂಡನ್​​ಗೆ ತೆರಳಿದ ಮೇಡಮ್​​ ಟುಸ್ಸಾಡ್ಸ್​ ಬೇಕರ್​​ ಸ್ಟ್ರೀಟ್​​ನಲ್ಲಿ ನೆಲೆಸಿದ್ರು. ಇತಿಹಾಸ ಪ್ರಸಿದ್ಧ ವ್ಯಕ್ತಿಗಳನ್ನ ಹಾಗೂ ಫ್ರೆಂಚ್​ ಕ್ರಾಂತಿಯ ಭೀಕರ ಅವಶೇಷಗಳನ್ನ ಮೇಣದಲ್ಲಿ ಚಿತ್ರಿಸಿ ಪ್ರದರ್ಶನಕ್ಕಿಡುತ್ತಿದ್ದರು. ಆಕೆಯ ಸಾವಿನ ಬಳಿಕ ಮೇಡಮ್​ ಟುಸ್ಸಾಡ್ಸ್​​ನ ಆಕರ್ಷಣೆಯೇನೂ ಕಡಿಮೆಯಾಗಲಿಲ್ಲ. ಮತ್ತಷ್ಟು ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆಗಳು ಮ್ಯೂಸಿಯಂಗೆ ಸೇರ್ಪಡೆಯಾಗಿ ವಿಶ್ವದ ಇತರೆ ಅನೇಕ ಪ್ರದೇಶಗಳಲ್ಲೂ ಮ್ಯಾಡಮ್​​ ಟುಸ್ಸಾಡ್ಸ್​ ಸ್ಥಾಪನೆಯಾಗಿದೆ. ಸದ್ಯ ವಿಶ್ವದ 24 ನಗರಗಳಲ್ಲಿ ಮ್ಯಾಡಮ್​​ ಟುಸ್ಸಾಡ್ಸ್​ ಮ್ಯೂಸಿಯಂ ಇದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv