ಸಿಂಹದ ಮುಂದೆ ಕೋಳಿ​​​​​ ಹಿಡಿದು ರೇಗಿಸುತ್ತಾ ವಿಕೃತಿ ಮೆರೆದ ಕಿಡಿಗೇಡಿಗಳು

ಗುಜರಾತ್​​ ಸಿಂಹಗಳಿಗೆ ಪ್ರಸಿದ್ಧಿ ಪಡೆದಿರೋ ರಾಜ್ಯ. ಆದ್ರೆ ಇಲ್ಲಿನ ಕೆಲವು ಕಡೆ ಮನುಷ್ಯನ ದುರ್ಬುದ್ಧಿಯಿಂದ ಸಿಂಹಗಳ ಪರಿಸ್ಥಿತಿ ಕೇಳೋರೇ ಇಲ್ಲದಂತಾಗಿದೆ. ಈ ಹಿಂದೆ ಯುವಕರ ಗುಂಪೊಂದು ಹಸಿದ ಸಿಂಹಿಣಿ ಎದುರು ಚಿಕನ್​​ ಇಟ್ಟು ಸತಾಯಿಸೋ ವಿಡಿಯೋ ಹರಿದಾಡಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೋಳಿಯನ್ನು ಹಗ್ಗಕ್ಕೆ ಕಟ್ಟಿ ಸಿಂಹ ಮುಂದೆ ಇಳಿಬಿಡಲಾಗಿದ್ದು, ಸಿಂಹ ಹತ್ತಿರಕ್ಕೆ ಬಂದ ಕೂಡಲೇ ಕೋಳಿಯನ್ನು ಮೇಲಕ್ಕೆ ಎಳೆದುಕೊಂಡು ರೇಗಿಸುತ್ತಾ ವಿಕೃತಿ ಮೆರೆದಿದ್ದಾರೆ. ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಬಬಾರಿಯಾ ರೇಂಜ್​​​​ನಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಏಷ್ಯಾಟಿಕ್​ ಲಯನ್ಸ್​ ಕಂಡುಬರುತ್ತವೆ. ಈ ಹಿಂದೆ ವಿಡಿಯೋ ಮಾಡಿದ್ದವರೇ ಈ ಬಾರಿಯೂ ಈ ಕೃತ್ಯವೆಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಿಡಿಗೇಡಿಗಳು ಈ ರೀತಿ ವಿಕೃತಿ ಮೆರೆದಿದ್ದಲ್ಲದೇ ಇದನ್ನು ವಿಡಿಯೋ ಮಾಡಿರೋದು ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಾಣಿಗಳು ತಮ್ಮ ಆವಾಸಸ್ಥಾನದಲ್ಲಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಇಂತಹ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv