ಮಗಳಿಗೆ ಜೀವ ಬೆದರಿಕೆ ಹಾಕಿದ ಶಾಸಕನ ಪಿ.ಎ

ಧಾರವಾಡ: ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರ ಆಪ್ತ ಕಮಲಾಕಾಂತ್ ತನ್ನ ಮಗಳ ಪ್ರೀತಿಗೆ ಅಡ್ಡ ಬಂದಿದ್ದಾರೆ. ಪ್ರೇಮ ವಿವಾಹವಾದ ಮಗಳು ಮತ್ತು ಆಕೆಯ ಪ್ರಿಯಕರನಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಸದ್ಯ ಶಿವರಾಮ್ ಹೆಬ್ಬಾರ ಆಪ್ತನ ಮಗಳು ಹಾಗೂ ಆಕೆಯ ಪ್ರಿಯಕರ ಅಲ್ಲಲ್ಲಿ ತಲೆಮರೆಸಿಕೊಂಡು ಓಡಾಡಿ ಧಾರವಾಡದಲ್ಲಿ ರಿಜಿಸ್ಟರ್ ವಿವಾಹವಾಗಿದ್ದಾರೆ. ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಹೋದ್ರು ಕೂಡ ನಮಗೆ ರಕ್ಷಣೆ ಸಿಗುವ ಭರವಸೆ ಇಲ್ಲ ಎಂದುಕೊಂಡು ಅಂಚೆ ಮೂಲಕವೇ ಉತ್ತರ ಕನ್ನಡ ಎಸ್ಪಿಗೆ ಲಿಖಿತ ದೂರು ರವಾನಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಆಪ್ತ ಕಮಲಾಕಾಂತ ನಾಯಕ ಎಂಬಾತನ ಮಗಳು ಯೋಗಿತಾ (19) ಅದೇ ಯಲ್ಲಾಪುರದ ಮಳ್ಯಾನಕೊಪ್ಪದ ವಿನಾಯಕ ಮಂಡಗೊಡ್ಲಿ (22) ಎಂಬಾತನೊಂದಿಗೆ ಪ್ರೇಮ ವಿವಾಹವಾಗಿದ್ದಾಳೆ. ಆದ್ರೆ ಅತ್ತ ಗಂಡ ವಿನಾಯಕನ ಮೇಲೆ ಕಿಡ್ನಾಪ್ ಕೇಸ್ ದಾಖಲಿಸಿರುವ ಕಮಾಲಾಕಾಂತ, ಶಾಸಕ ಹೆಬ್ಬಾರ ಹೆಸರು ಬಳಸಿಕೊಂಡು ಪೊಲೀಸರಿಂದ ವಿನಾಯಕನ ಮನೆಯವರಿಗೆ ತೊಂದರೆ ಕೊಡಲು ಆರಂಭಿಸಿದ್ದಾರೆ ಎನ್ನಲಾಗಿದೆ.

ಇದರಿಂದ ರೋಸಿ ಹೋಗಿರುವ ಈ ಪ್ರೇಮಿಗಳಿಬ್ಬರು ಎರಡು ವಾರಗಳಿಂದ ಅಲ್ಲಲ್ಲಿ ಸುತ್ತಾಡಿ, ಈಗ ಧಾರವಾಡಕ್ಕೆ ಆಗಮಿಸಿ ಧಾರವಾಡದ ಉಪನೊಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದಾರೆ. ಸದ್ಯ ನಮಗೆ ನೆಮ್ಮದಿಯಿಂದ ಬದುಕಲು ಬಿಡಿ ಎಂದು ಬೇಡಿಕೊಳ್ತಾ ಇರೋ, ಈ ಪ್ರೇಮಿಗಳು ತಮ್ಮ ಹಿಂದೆ ಶಾಸಕ ಶಿವರಾಮ ಹೆಬ್ಬಾರ್ ಇದಾರೆ ಅನ್ನೋದನ್ನೆ ಮುಂದಿಟ್ಟುಕೊಂಡು ನಮ್ಮ ತಂದೆ ನಮಗೆ ಬೆದರಿಕೆ ಹಾಕ್ತಾ ಇದ್ದಾರೆ. ಎಲ್ಲಿಗೆ ಹೋದ್ರೂ ಬಿಡ್ತಾ ಇಲ್ಲ. ಹೆಬ್ಬಾರ ಶಾಸಕ ಅನ್ನೋ ಕಾರಣಕ್ಕೆ ಪೊಲೀಸ್ರು ಕೂಡ ನಮ್ಮ ನೆರವಿಗೆ ಬರ್ತಾ ಇಲ್ಲ ಅಂತೆಲ್ಲ ಆರೋಪಿಸ್ತಾ ಇದ್ದಾಳೆ ಶಾಸಕ ಹೆಬ್ಬಾರ ಆಪ್ತನ ಪುತ್ರಿ ಯೋಗಿತಾ.
ನಾನು ಮನಸಾರೆ ಒಪ್ಪಿಕೊಂಡೇ ವಿನಾಯಕನ ಜೊತೆ ಬಂದಿದ್ದೇನೆ. 6 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ಆದ್ರೆ ಇದು ನಮ್ಮ ತಂದೆಗೆ ಇಷ್ಟವಿಲ್ಲ. ಅದಕ್ಕಾಗಿ ನನ್ನ ಪತಿ ವಿರುದ್ಧ ಇಲ್ಲಸಲ್ಲದ ದೂರುಗಳನ್ನು ದಾಖಲಿಸ್ತಾ ಇದಾರೆ ಅಂತಾ ಅಳಲು ತೋಡಿಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv