ಶುಗರ್​, ಬಿಪಿ, ಕೊಲೆಸ್ಟ್ರಾಲ್​ ಅಂತ ಕೇಳಿ ಕೇಳಿ ಸಾಕಾಗಿದೆಯಾ..?

ಸೂರ್ಯನ ಬೆಳಕು ಧಾರಾಳವಾಗಿ ಸಿಕ್ಕು, ಹೇರಳವಾಗಿ ಮಳೆ ಸುರಿದು, ಪ್ರಕೃತಿ ಸದಾ ಶ್ರೀಮಂತವಾಗಿರೋ ದೇಶ ನಮ್ಮದು. ಭಾರತೀಯರು ಆಹಾರ ಹಾಗೂ ಆರೋಗ್ಯ ವಿಚಾರಕ್ಕೆ ನಿಜವಾಗ್ಲೂ ಲಕ್ಕಿ. ಪ್ರಕೃತಿ ಸಂಪತ್ತು ಹೇರಳವಾಗಿರೋ ನಮ್ಮ ದೇಶದಲ್ಲಿ ಎಲ್ಲರ ಆರೋಗ್ಯನೂ ತುಂಬಾನೇ ಚೆನ್ನಾಗಿರಬೇಕು ಅಂತಾ ಪ್ರಪಂಚದಲ್ಲಿರೋರೆಲ್ಲಾ ಅಂದ್ಕೋತಾರೆ. ಆದ್ರೆ ಲೈಫ್​ಸ್ಟೈಲ್​ ಡಿಸೀಸ್​ಗಳು ಈಗ ಭಾರತೀಯರನ್ನು ಕಾಡುತ್ತಿವೆ ಅಂತಾ ಹೇಳಿದೆ WHO(ವಲ್ಡ್​ ಹೆಲ್ತ್ ಆರ್ಗನೈಸೇಷನ್​).

ಲೈಫ್​ಸ್ಟೈಲ್​ ಡಿಸೀಸ್‌​ ಅಂದ್ರೆ ಏನು..?

ಸಾಂಕ್ರಾಮಿಕವಲ್ಲದ ಲೈಫ್​ಸ್ಟೈಲ್​ ಡಿಸೀಸಸ್,​ ಇನ್ಯಾರಿಂದಾನೋ ನಮಗೆ ಹರಡದೇ ನಮ್ಮ ನಿರ್ಲಕ್ಷ್ಯದಿಂದ ನಾವೇ ಆಹ್ವಾನ ಕೊಟ್ಟು, ತಂದುಕೊಳ್ಳೋ ಅಂಥದ್ದು. ಜೀವನ ಶೈಲಿಯಲ್ಲಿ ಶಿಸ್ತಿನ ಕೊರತೆಯಿಂದ ಶುರುವಾಗುವ ರೋಗಗಳೇ ಲೈಫ್​ಸ್ಟೈಲ್​ ಡಿಸೀಸ್‌​ಗಳು. ಅಲ್ಲದೇ ಈ ರೋಗಗಳು ಜೀವನ ಪರ್ಯಂತ, ನಿರಂತರವಾಗಿ ಮನುಷ್ಯನನ್ನು ಕಾಡುತ್ತವೆ. ಭಾರತೀಯರನ್ನು ಕಾಡುತ್ತಿರೋ ಹೈ ಬ್ಲಡ್​ಪ್ರಷರ್, ಟೈಪ್​ 2 ಡಯಾಬಿಟಿಸ್​, ಹೃದಯ ರೋಗಗಳು, ಸ್ಟ್ರೋಕ್​(ಲಕ್ವ), ಅಲ್​ಝೈಮರ್ಸ್​, ಕ್ಯಾನ್ಸರ್​..! ಅಲ್ಲದೆ ಒಬೆಸಿಟಿ.. ಇವೆಲ್ಲಾ ಲೈಫ್​ಸ್ಟೈಲ್​ ಡಿಸೀಸ್​ಗಳೇ.

ದಿನಚರಿಯನ್ನು  ಸೂರ್ಯನ ದಿನಚರಿಯ ಜೊತೆ ಹೊಂದಿಸಿ

ನಮ್ಮ ದಿನಚರಿಯನ್ನು  ಸೂರ್ಯನ ದಿನಚರಿಯ ಜೊತೆ ಹೊಂದಿಸಿದರೆ ನಾವು ಶೇಕಡಾ 90 ರೋಗಗಳನ್ನು ಹೊಡೆದೋಡಿಸಿದಂತೆಯೇ. ನಮ್ಮ ಆರೋಗ್ಯ ಹೆಚ್ಚಾಗಿ ನಮ್ಮ ಜೀವನಶೈಲಿಯನ್ನು ಆಧರಿಸಿದೆ. ಅದರಲ್ಲೂ ಪ್ರಕೃತಿಯ ಜೊತೆಗೆ ನಮ್ಮ ಸಂಬಂಧ ಎಷ್ಟು ಚೆನ್ನಾಗಿದ್ಯೋ ಅಷ್ಟು ನಾವು ಆರೋಗ್ಯವಂತರು.

ಬ್ರಾಹ್ಮೀ ಮುಹೂರ್ತದಲ್ಲಿ ಹಾಸಿಗೆಯಿಂದೆದ್ದು ಸ್ವಲ್ಪ ವ್ಯಾಯಾಮ.. ಸಮಯಕ್ಕೆ ಸರಿಯಾಗಿ ಹಿತವಾದ ಹಾಗೂ ಆರೋಗ್ಯಕರವಾದ ಊಟ.. ನೆಮ್ಮದಿಯ ನಿದ್ದೆ.. ಇವೆಲ್ಲದರ ಮಧ್ಯೆ ದೇಹಕ್ಕೆ ಬೇಕಾದಾಗ ಸ್ವಲ್ಪ ಆರಾಮ.. ಹೀಗೆ ವ್ಯವಸ್ಥಿತವಾದ ದಿನಚರಿ ಇರ್ಬೇಕು.

ಲೈಫ್ಸ್ಟೈಲ್ಡಿಸೀಸ್‌ನಿಂದ ತಪ್ಪಿಸಿಕೊಳ್ಳೊದು ಹೇಗೆ ?

1. ಮೊದಲನೆಯದಾಗಿ, ಯಾವುದೇ ವಿಷಯಕ್ಕೂ ಟೆನ್​ಷನ್​ ಬೇಡ. ವಿಷಯಗಳನ್ನು ತುಂಬಾ ಸೀರಿಯಸ್​ ಆಗಿ ತೆಗೆದುಕೊಳ್ಳದೇ, ಪರಿಹಾರ ಹುಡುಕೋ ಕಡೆ ಯೋಚನೆ ಮಾಡೋಣ. ಸದಾಕಾಲ ನಗುನಗುತ್ತಾ ಇರೋಣ. ಮನೆಯಲ್ಲಿ, ಆಫೀಸಿನಲ್ಲಿ, ಸ್ನೇಹಿತರ ಜೊತೆಯಲ್ಲಿ.. ಹೀಗೆ ಎಲ್ಲಾ ಕಡೆ ಕಾಣುವ ಜೋಕ್​ಗಾಗಿ ಹುಡುಕಾಡಿ, ನಗುತ್ತಿರೋಣ.

2. ಎಲ್ಲಾ ವಯಸ್ಸಿನವರೂ ದಿನವೂ ಎಕ್ಸರ್ಸೈಜ್​ ಮಾಡಬೇಕು. ನಮ್ಮ ವಯಸ್ಸಿಗೆ ಮತ್ತು ಪ್ರವೃತ್ತಿಗೆ ಸರಿಹೊಂದುವ ಯಾವುದೇ ರೀತಿಯ ದೈಹಿಕ ಚಟುವಟಿಕೆಯನ್ನು ಆರಿಸಿಕೊಳ್ಳೋಣ. ವಾಕಿಂಗ್​, ಯೋಗ ಅಥವಾ ಡಾನ್ಸ್​ ಹೀಗೆ ಮನಸ್ಸಿಗೆ ಮುದಕೊಡುವ ಒಂದನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳೋಣ.

3. ಮನೆ, ಆಫೀಸ್​ ಅಥವಾ ಇನ್ನೆಲ್ಲೇ ಆಗಲಿ, ಮಹಡಿ ಹತ್ತುವಾಗ ಮೆಟ್ಟಿಲನ್ನೇ ಉಪಯೋಗಿಸಿ. ಯಾವುದೇ ಕಾರಣಕ್ಕೂ ಲಿಫ್ಟ್​ ಅಥವಾ ಎಸ್ಕಲೇಟರ್​ ಉಪಯೋಗಿಸುವುದು ಬೇಡ.

4. ಸರಿಯಾದ ಸಮಯಕ್ಕೆ ಬ್ಯಾಲೆನ್ಸ್​ಡ್​ ಡಯಟ್​ ಹೊಂದಿರುವ ಆಹಾರ ತೆಗೆದುಕೊಳ್ಳೋಣ. ನಮ್ಮ ಪ್ರತಿ ಊಟದ ತಟ್ಟೆಯಲ್ಲಿ ಪ್ರೊಟೀನ್​, ಕಾರ್ಬೊಹೈಡ್ರೇಟ್​ ಮತ್ತು ವಿಟಮಿನ್​ಗಳೆಲ್ಲವೂ ಇರಲಿ.

5. ಮೈದಾ, ರಿಫೈನ್ಡ್​ ಅಥವಾ ಪ್ಯಾಕ್ಡ್​ ಫುಡ್​ಗಳನ್ನು ಖಂಡಿತಾ ಬಿಟ್ಟುಬಿಡೋಣ.

6. ಪ್ರತಿದಿನ 400 ರಿಂದ 500ಗ್ರಾಂನಷ್ಟು ಸೀಜನಲ್​ ಫ್ರೂಟ್​ ತಿನ್ನೋಣ.

7. ಬಾಯಾರಿಕೆಯಾದಾಗ, ತೃಪ್ತಿಯಾಗುವಷ್ಟು ನೀರನ್ನು ಕುಡಿಯೋಣ. ನೀರಿನ ಪ್ರಮಾಣವನ್ನು ಇಂತಿಷ್ಟೇ ಅಂತ ನಿರ್ಧರಿಸಲಾಗುವುದಿಲ್ಲ. ಅವರವರ ದೇಹ ಪ್ರಕೃತಿಗೆ ತಕ್ಕಷ್ಟು ನೀರನ್ನು ದೇಹಕ್ಕೆ ಪೂರೈಸಬೇಕಾಗುತ್ತದೆ.

8. ಯೋಗಾಸನ ಮತ್ತು ಪ್ರಾಣಾಯಾಮದ ಪ್ರ್ಯಾಕ್ಟೀಸ್​, ದಿನಚರಿಯ ಒತ್ತಡವನ್ನು ನಿಭಾಯಿಸಲು ಅತ್ಯಗತ್ಯ. ಅದನ್ನು ರೂಢಿಸಿಕೊಳ್ಳೋಣ.

9. ಸಿಗರೇಟ್​ ಮತ್ತು ಮದ್ಯಪಾನದಿಂದ ದೂರವಿರೋಣ. ಶಿಸ್ತಿನ ದಿನಚರಿಯ ಎಲ್ಲಾ ಲಾಭಗಳನ್ನೂ ಸೊನ್ನೆ ಮಾಡಿಬಿಡುವ ಈ ವ್ಯಸನ ಸ್ವಲ್ಪವಿದ್ದರೂ ಒಳ್ಳೇದಲ್ಲ.

ಆರೋಗ್ಯವೇ ಭಾಗ್ಯ. ನಿಮ್ಮ ಕೈಯಲ್ಲಿ ನಿಮ್ಮ ಆರೋಗ್ಯವಿದೆ. ನಮ್ಮ ದಿನಚರಿಯಲ್ಲಿ ಶಿಸ್ತು, ನಿಯಮ ಪಾಲನೆ ರೂಢಿಸಿಕೊಳ್ಳಿ, ಲೈಫ್​ ಎಂಜಾಯ್​ ಮಾಡಿ.

ವಿಶೇಷ ಬರಹ -ಜಯಶ್ರೀ 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv