ಟಿಕೆಟ್​ಗಾಗಿ ಬೆಂಬಲಿಗರ ಹೊಡೆದಾಟ: ಓರ್ವ ಸಾವು

ಚಿಕ್ಕಬಳ್ಳಾಪುರ: ಟಿಕೆಟ್​ಗಾಗಿ ಪೈಪೋಟಿ ನಡೆಸುತ್ತಿರುವ ಕಾಂಗ್ರೆಸ್​ ನಾಯಕರನ್ನ ಬೆಂಬಲಿಸಲು ಬಂದಿದ್ದ ಬೆಂಬಲಿಗರ ನಡುವೆಯೇ ಕಿತ್ತಾಟ ನಡೆದು ಓರ್ವ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 2018ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಸಮಿತಿಯಿಂದ ಮೂರು ಜನರ ಚುನಾವಣಾ ವೀಕ್ಷಣಾ ತಂಡದ ಎದುರಲ್ಲೇ ಈ ಗಲಾಟೆ ನಡೆದಿದೆ. ನಿನ್ನೆ ವಿಧಾನ ಪರಿಷತ್ ಸದಸ್ಯ ಐ.ಜಿ. ಸನದಿ, ಸಿ.ಎಂ. ಲಿಂಗಪ್ಪ ಅವರಿದ್ದ ವೀಕ್ಷಣಾ ತಂಡದ ಎದುರು ಹಾಲಿ ಶಾಸಕ ಡಾ.ಕೆ. ಸುಧಾಕರ್, ಕಾಂಗ್ರೆಸ್ ಮುಖಂಡರಾದ ಕೆ.ವಿ. ನವೀನ್ ಕಿರಣ್ ಮತ್ತು ಗಂಗರೆಕಾಲುವೆ ನಾರಾಯಣ ಸ್ವಾಮಿ ತಮ್ಮ ಬಲ ಪ್ರದರ್ಶನ ಮಾಡಿದ್ರು.

ಒಂದೆಡೆ ನವೀನ್ ಕಿರಣ್ ಬೆಂಬಲಿಗರು, ತಮ್ಮ ಮುಖಂಡನಿಗೇ ಟಿಕೆಟ್ ಕೊಡಬೇಕು ಅಂತ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ನಮ್ಮೆಲ್ಲ ಪ್ರೀತಿ, ಆಶೀರ್ವಾದ ನವೀನ್ ಕಿರಣ್ ಮೇಲಿದೆ ಅವರಿಗೇ ಟಿಕೆಟ್ ಕೊಡಬೇಕು ಅಂತ ಆಗ್ರಹಿಸಿದ್ರು. ನವೀನ್ ಪರ ಘೋಷಣೆಗಳನ್ನ ಕೂಗಿದ್ರು. ಸುಮಾರು ಒಂದು ಕಿಲೋಮೀಟರ್​ನಷ್ಟು ದೂರ ಜನಸಾಗರವೇ ಕಾಣಿಸುತ್ತಿತ್ತು.

ಲಾಠಿ ಚಾರ್ಜ್​ಗೆ ಯುವಕ ಬಲಿ
ಮತ್ತೊಂದೆಡೆ ಹಾಲಿ ಶಾಸಕ ಸುಧಾಕರ್ ಹಾಗೂ ನಾರಾಯಣಸ್ವಾಮಿ ಬಣದವರು ಮೆರವಣಿಗೆ ಮೂಲಕ ಸಭೆ ನಡೀತಿದ್ದ ಸ್ಥಳಕ್ಕೆ ಆಗಮಿಸಿದ್ರು. ಆದ್ರೆ, ಅದಕ್ಕೂ ಮೊದಲೇ ಸುಧಾಕರ್ ಅವರ ಕೆಲವು ಬೆಂಬಲಿಗರು ಸಭೆ ನಡೀತಿದ್ದ ಸಮುದಾಯ ಭವನದಲ್ಲಿ ಕುಳಿತಿದ್ರು. ಸ್ಥಳ ಚಿಕ್ಕದಿದ್ದು, ಕುರ್ಚಿಗಳೂ ಕಡಿಮೆಯಿದ್ದವು. ಈ ವೇಳೆ ಮೂರು ಬಣಗಳ ಬೆಂಬಲಿಗರ ನಡುವೆ ಕಿತ್ತಾಟವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 29 ವರ್ಷದ ವಿನಯ್ ಎಂಬಾತ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಸದ್ದಿಲ್ಲದೆ ಸೃಷ್ಟಿಯಾಯ್ತು ನಾಲ್ಕನೆ ಬಣ..!
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ವೀಕ್ಷಣಾ ತಂಡ ಸಮುದಾಯ ಭವನದಿಂದ ಕಾಲ್ಕಿತ್ತಿದೆ. ಮತ್ತೊಂದೆಡೆ ವೀಕ್ಷಕರು ಬಂದಿದ್ದರಿಂದ ಜಿಲ್ಲಾ ಕಾಂಗ್ರೆಸ್​ನಲ್ಲಿ ಸಣ್ಣಗೆ ಹೊಗೆಯಾಡುತ್ತಿದ್ದ ಭಿನ್ನಮತದ ಬೆಂಕಿಗೆ ಈಗ ತುಪ್ಪ ಸುರಿದಂತಾಗಿದೆ. ಮತ್ತೊಂದೆಡೆ ವೀಕ್ಷಕರ ತಂಡ ನಗರದ ಕಾಮತ್ ಹೋಟೆಲ್ ಬಳಿ ಬರುತ್ತಿದ್ದಂತೆ ಅಡಗಲ್ಲು ಶ್ರೀಧರ್​ರ ಮತ್ತೊಂದು ಬಣ ಕಾರು ತಡೆದು, ಮನವಿ ಪತ್ರ ಸಲ್ಲಿಸಿದೆ. ಒಟ್ನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಒಡೆದ ಮನೆಯಾಗಿದೆ. ಟಿಕೆಟ್​ಗಾಗಿ ನಡೆದ ಲಾಬಿಯಲ್ಲಿ ಒಂದು ಬಲಿ ಕೂಡ ಆಗಿದೆ.

Leave a Reply

Your email address will not be published. Required fields are marked *