ಯುಪಿಎ ಸಮಯದ ಹೆಲಿಕಾಪ್ಟರ್ ಸ್ಕ್ಯಾಮ್ ಆರೋಪಿ ಪರ ಕಾಂಗ್ರೆಸ್​ ಮುಖಂಡನ ವಕಾಲತ್ತು..!

ನವದೆಹಲಿ: ಯುಪಿಎ ಆಡಳಿತದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಹೆಲಿಕಾಪ್ಟರ್ ಹಗರಣದ ಆರೋಪಿ ಪರ ಕಾಂಗ್ರೆಸ್​ ಮುಖಂಡ ವಕಾಲತ್ತು ವಹಿಸಿದ್ದಾರೆ! ಯುವ ಕಾಂಗ್ರೆಸ್​ ಘಟಕದ ಕಾನೂನು ವಿಭಾಗದ ಮುಖ್ಯಸ್ಥ ಅಲ್ಜೋ ಕೆ.ಜೋಸೆಫ್, ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್​ ಮೈಕಲ್ ಪರ ವಕಾಲತ್ತು ವಹಿಸಿದ್ದಾರೆ. ಅಂದಿನ ಯುಪಿಎ ಸರ್ಕಾರಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಿರುವ ಈ ಹಗರಣದ ಪ್ರಮುಖ ಆರೋಪಿ ಪರ ಕಾಂಗ್ರೆಸ್​ ಮುಖಂಡ ವಕಲತ್ತು ವಹಿಸಿರೋದು ಹಲವು ಚರ್ಚೆಗಳನ್ನ ಹುಟ್ಟು ಹಾಕಿದೆ.

ಸದ್ಯ ಆಗಸ್ಟಾ ವೆಸ್ಟ್​​​ಲ್ಯಾಂಡ್​​ ಹಗರಣ ಮಧ್ಯವರ್ತಿ ಆರೋಪಿ ಕ್ರಿಶ್ಚಿಯನ್​ ಮೈಕಲ್ ನನ್ನ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಸಿಬಿಐ ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆ ನಡೆಸುತ್ತಿದೆ. ಸದ್ಯ ಆರೋಪಿ ಕ್ರಿಶ್ಚಿಯನ್​ ಮೈಕಲ್​​ ನನ್ನು ಐದು ದಿನ ಸಿಬಿಐ ವಶಕ್ಕೆ ಪಡೆದಿದೆ. ಇವರ ಪರ ವಕಾಲತ್ತು ವಹಿಸಲು ಕಾಂಗ್ರೆಸ್​​ ಮುಖಂಡ ಕೆ.ಜೋಸೆಫ್ ಮುಂದೆ ಬಂದಿದ್ದಾರೆ.

ಈ ಪ್ರಕರಣವನ್ನು ವಹಿಸಿಕೊಂಡ ವಕೀಲನ ವಿರುದ್ಧವಾಗಿ ಕಾಂಗ್ರೆಸ್​​ ಸೇರಿದ್ದಂತೆ ಬಿಜೆಪಿ ಕಾರ್ಯಕರ್ತರೂ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾದ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಆರೋಪಿ ಪರ ವಕಾಲತ್ತು ವಹಿಸಿರುವ ಜೋಸೆಫ್ ಅವರನ್ನ ಇಂಡಿಯನ್​ ಯೂಥ್​​ ಕಾಂಗ್ರೆಸ್​​ ಲೀಗಲ್​ ಡಿಪಾರ್ಟ್​ಮೆಂಟ್​​ನಿಂದ ವಜಾ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಜೋಸೆಫ್, ವೃತ್ತಿಯೇ ಬೇರೆ, ಪಕ್ಷವೇ ಬೇರೆ. ಯಾವುದೇ ಕಕ್ಷಿದಾರ ನನ್ನ ಬಳಿ ಬಂದಾಗ ನಾನು ನನ್ನ ವೃತ್ತಿನಿಷ್ಠೆಯನ್ನು ಮೆರೆಯಬೇಕಾಗುತ್ತದೆ ಅಂತಾ ಸಮರ್ಥಿಸಿಕೊಂಡಿದ್ದಾರೆ.