ಭೂಮಿ ಕಳೆದುಕೊಂಡ ರೈತರಿಗೆ 10 ವರ್ಷ ಕಳೆದರೂ ಸಿಕ್ಕಿಲ್ಲ ಸೂಕ್ತ ಪರಿಹಾರ

ಧಾರವಾಡ: ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತರಣೆಗಾಗಿ 2007ರಲ್ಲಿ ರೈತರಿಂದ ಭೂಮಿಯನ್ನು ಪಡೆದುಕೊಂಡಿದೆ. ಆದರೆ ಭೂಮಿ ನೀಡಿ 10 ವರ್ಷ ಕಳೆದರೂ ಸಂತ್ರಸ್ತರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಆಸಕ್ತಿ ತೋರುತ್ತಿಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದ ಅಧ್ಯಕ್ಷ ರಘೋತ್ತಮ ಕುಲಕರ್ಣಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ 2009-10ರಲ್ಲಿ ಕೆಲವು ಸಂತ್ರಸ್ತರಿಗೆ ಮಾತ್ರ ನಿವೇಶನ ನೀಡಿ ಕೈ ತೊಳೆದುಕೊಂಡಿದೆ. ಇನ್ನುಳಿದ ಸಂತ್ರಸ್ತರ ಕಡೆಗೆ ಗಮನ ಹರಿಸಿಲ್ಲ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ರಾಜ್ಯ ಸರ್ಕಾರ ಹಾಗೂ ನಗರಾಭಿವೃದ್ಧಿ ಇಲಾಖೆ, ಭೂಮಿ ನೀಡಿದ ಸಂತ್ರಸ್ತರಿಗೆ ನಿವೇಶನ ನೀಡಿ ಸೂಕ್ತ ಪರಿಹಾರ ನೀಡಬೇಕು. ಅಲ್ಲದೇ ಸರ್ಕಾರ ಅನುಮೋದಿಸಲ್ಪಟ್ಟ ನಿವೇಶನಗಳನ್ನು ಸಹ ಸಂಪೂರ್ಣವಾಗಿ ವಿತರಿಸದೇ ಸಂತ್ರಸ್ತರಿಗೆ ನಿವೇಶನ ವಿತರಿಸಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು. ಕೂಡಲೇ ಭೂಮಿ ಕಳೆದುಕೊಂಡರಿಗೆ ನ್ಯಾಯ ಒದಗಿಸಿಬೇಕೆಂದು ಸರ್ಕಾರಕ್ಕೆ ರಘೋತ್ತಮ ಕುಲಕರ್ಣಿ ಒತ್ತಾಯಿಸಿದ್ದಾರೆ.