ಸರ್ಕಾರಿ ಭೂ ಕಬಳಿಕೆ ಮಾಡಿದ್ದ ಆರೋಪಿಗೆ ಜೈಲು ಶಿಕ್ಷೆ

ಬೆಂಗಳೂರು: ಸರ್ಕಾರಿ ಭೂ ಕಬಳಿಕೆ ಮಾಡಿದ್ದ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯದ ವಿಭಾಗೀಯ ಪೀಠ ಆದೇಶಿಸಿದೆ. ಆನೇಕಲ್ ತಾಲ್ಲೂಕು ಜಿಗಣಿ ಬಳಿಯ ಯಾರಂಡಹಳ್ಳಿ ನಿವಾಸಿ ಕೃಷ್ಣಾರೆಡ್ಡಿ ಶಿಕ್ಷೆಗೊಳಗಾದವರು.

ಕೃಷ್ಣಾರೆಡ್ಡಿ ತನ್ನೂರಿನಲ್ಲಿ ಸರ್ಕಾರಿ ಜಾಗ ಸರ್ವೆ ನಂಬರ್ 86 ಮತ್ತು 87 ರಲ್ಲಿ ಒತ್ತುವರಿ ಮಾಡಿದ್ದರು. ಆ ಜಾಗದಲ್ಲಿ ಮನೆ ನಿರ್ಮಿಸಿ ಬಾಡಿಗೆಗೆ ನೀಡಿದ್ದರು. ಅಲ್ಲದೇ, ಸರ್ವೇ ನಂಬರ್ 86 ರಲ್ಲಿನ ತಿಪ್ಪೇಗುಂಡಿ, 87 ರ ತೋಪಿನಲ್ಲಿ ಒತ್ತುವರಿ ಮಾಡಿದ್ದರು. ಈ ಬಗ್ಗೆ ಬಿಎಂಟಿಎಫ್​ನಲ್ಲಿ ಕೇಸ್ ದಾಖಲಾಗಿತ್ತು. ಈ ಬಗ್ಗೆ ಬಿಎಂಟಿಎಫ್ ಪೊಲೀಸರು‌ ಮೊದಲು ಸಿಟಿ ಸಿವಿಲ್ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇತ್ತೀಚೆಗಷ್ಟೆ ಪ್ರಕರಣ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯಕ್ಕೆ ವರ್ಗವಾಗಿತ್ತು. ಬಿಎಂಟಿಎಫ್ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಶೈಲಜಾ ಕೃಷ್ಣಾ ನಾಯಕ್ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ 192(A) ಕರ್ನಾಟಕ ಲ್ಯಾಂಡ್ ಗ್ರಾಬಿಂಗ್ ಆಕ್ಟ್ ಅಡಿಯಲ್ಲಿ ಕೃಷ್ಣಾರೆಡ್ಡಿಗೆ ಶಿಕ್ಷೆ ವಿಧಿಸಿದೆ. ಅಲ್ಲದೇ, ಒತ್ತುವರಿಯಾಗಿದ್ದ ಸ್ಥಳವನ್ನ ವಶಕ್ಕೆ ಪಡೆಯುವಂತೆ ಆನೇಕಲ್ ತಹಸೀಲ್ದಾರ್​ಗೆ ಕೋರ್ಟ್ ​ಸೂಚಿಸಿದೆ.