ರಾಹುಲ್​ ಗಾಂಧಿ ಹೇಳಿಕೆಗೆ ತಿರುಗಿಬಿದ್ದ ಲಲಿತ್​ ಮೋದಿ

ದೆಹಲಿ: ಎಲ್ಲಾ ಮೋದಿಗಳೂ ಮೋಸಗಾರರು ಎಂಬ ರಾಹುಲ್​ ಗಾಂಧಿಯ ಹೇಳಿಕೆಗೆ ಈಗಾಗಲೇ ಆಕ್ರೋಶ ವ್ಯಕ್ತವಾಗ್ತಿದೆ. ಇದರ ಬೆನ್ನಲ್ಲೇ ಮಾಜಿ ಐಪಿಎಲ್​ ಲೀಗ್​ನ ಮುಖ್ಯಸ್ಥ ಲಲಿತ್​ ಮೋದಿ ಕೂಡ ರಾಹುಲ್​ಗೆ ಟಾಂಗ್​ ಕೊಟ್ಟಿದ್ದಾರೆ. ಲಲಿತ್​ ಮೋದಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಕಾಂಗ್ರೆಸ್​ 5 ದಶಕಗಳಿಂದ ದೇಶವನ್ನು ಲೂಟಿ ಮಾಡಿದೆ ಎಂದು ಕುಟುಕಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ವಿರುದ್ಧ ಇಂಗ್ಲೆಂಡ್ ಕೋರ್ಟ್‌ನಲ್ಲಿ ಕಾನೂನು ಕ್ರಮಕ್ಕೆ ಮನವಿ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ರಾಹುಲ್​ ಗಾಂಧಿಯನ್ನು ಪಪ್ಪು ಎಂದು ಕರೆದಿರುವ ಲಲಿತ್​ ಮೋದಿ ತಮ್ಮ ಟ್ವೀಟ್​​ ಜೊತೆಗೆ ಒಂದು ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ಬೋಫೋರ್ಸ್‌​ ​ಹಗರಣದಲ್ಲಿ ರಾಹುಲ್​ಗಾಂಧಿ ತಂದೆ ಹಾಗೂ ಮಾಜಿ ಪ್ರಧಾನ ಮಂತ್ರಿ ರಾಜೀವ್​ಗಾಂಧಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಇನ್ನು ಕಾಂಗ್ರೆಸ್​ ಅತೀ ಭ್ರಷ್ಟ ಕುಟುಂಬ ಎಂದು ಜರಿದಿರುವ ಮೋದಿ, ಕಾಂಗ್ರೆಸ್​ನ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಸೇರಿದಂತೆ ಹಲವು ನಾಯಕರು ಅಧಿಕಾರದಲ್ಲಿದ್ದಾಗ ಭ್ರಷ್ಟರಾಗಿದ್ದರು ಎಂದು ಆರೋಪಿಸಿದ್ದಾರೆ.