ಮತ್ತೆ ಮರುಜೀವ ಪಡೆಯಲಿವೆಯಾ ಕೆರೆಗಳು..?

ಬೆಂಗಳೂರು: ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್, ಮೇಯರ್ ಸಂಪತ್ ರಾಜ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಕೆರೆಗಳ ಪರಿಶೀಲನೆ ನಡೆಸಲಿದ್ದಾರೆ. ಸಿವಿ ರಾಮನ್ ನಗರ ಕ್ಷೇತ್ರದ ಕಗ್ಗದಾಸಪುರ ಕೆರೆ ತಪಾಸಣೆ ನಡೆಸಿದ ಬಳಿಕ ಬೆಳ್ಳಂದೂರು ಕೆರೆ ಪರಿಶೀಲನೆ ನಡೆಸಲಿದ್ದಾರೆ.
ಕೆರೆಗಳನ್ನ ಅಭಿವೃದ್ಧಿ ಮಾಡುವಂತೆ ಹಾಗೂ ಉಳಿಸುವಂತೆ ಸ್ಥಳೀಯರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಪರಿಶೀಲನಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಕೆರೆಗಳ ಹೂಳು ತೆಗೆಯುವುದು, ನೀರುಗಾಲುವೆಗಳ ಅಭಿವೃದ್ಧಿ, ಕೊಳಚೆ ನೀರು ಕೆರೆ ಸೇರುವುದನ್ನ ತಡೆಗಟ್ಟುವುದು, ಅಲ್ಲದೆ ಒತ್ತುವರಿ ಜಾಗ ವಶಕ್ಕೆ ಪಡೆಯುವುದು ಹೀಗೆ ಒಟ್ಟಾರೆ ಕೆರೆಗಳ ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
48 ಎಕರೆ ಪ್ರದೇಶವಿರುವ ಕಗ್ಗದಾಸಪುರ ಕೆರೆ, ಸದ್ಯ 37 ಎಕರೆಗೆ ತಲುಪಿದೆ. ಒಟ್ಟು ಕೆರೆಯ 11 ಎಕರೆ ಒತ್ತುವರಿಯಾಗಿದೆ. ಇಲ್ಲಿಯವರೆಗೆ ಕಗ್ಗದಾಸಪುರ ಕೆರೆ ಅಭಿವೃದ್ಧಿಗೆ 2 ಕೋಟಿ 98 ಲಕ್ಷ ವೆಚ್ಚ ಮಾಡಲಾಗಿದ್ರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಇದೆಲ್ಲದರ ಹಿನ್ನೆಲೆಯಲ್ಲಿ ಡಿಸಿಎಂ.ಡಾ.ಜಿ.ಪರಮೇಶ್ವರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಮೊದಲ ಪರಿಶೀಲನೆ ನಡೆಯಲಿದೆ. ಪರಿಶೀಲನೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಾಥ್ ನೀಡಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv