ಭೂತಾಯಿ ಒಲಿದಳು ಕಾರ್ಮಿಕನಿಗೆ, ನೀಡಿದಳು ₹ 1.5 ಕೋಟಿ ಮೌಲ್ಯದ ವಜ್ರದ ಕಾಣಿಕೆ..!

ಅದೃಷ್ಟ ಅನ್ನುವುದು ಯಾವಾಗ ಹೇಗೆ ಒಲಿದು ಬರುತ್ತದೆ ಎಂಬುದು ತಿಳಿಯುವುದಿಲ್ಲ. ಆದರೆ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೇ ನಮಗೆ ಸಿಕ್ಕ ಅವಕಾಶಗಳಲ್ಲಿ ಅದೃಷ್ಟ ಕಾಣಬಹುದು. ಮೈ ಬಗ್ಗಿಸಿ ದುಡಿಯುತ್ತಿದ್ದ ಕಾರ್ಮಿಕರೊಬ್ಬರಿಗೆ ಬರೋಬ್ಬರಿ ₹ 1.5 ಕೋಟಿ ಮೌಲ್ಯದ ವಜ್ರ ಸಿಕ್ಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಕೃಷ್ಣಾ ಕಲ್ಯಾಣಪುರ್​​ ಪಟ್ಟಿ ಗ್ರಾಮದಲ್ಲಿ ಗಣಿ ಕೆಲಸ ನಡೆಯುತ್ತಿತ್ತು. ಇದೇ ಭಾಗದ ಬುಂದೇಲ್ಖಂಡ್​ ಪ್ರದೇಶದಲ್ಲಿ ಗಣಿ ಕಾರ್ಮಿಕನಾಗಿದ್ದ ಮೋತಿಲಾಲ್​​ ಪ್ರಜಾಪತಿ ಅವರಿಗೆ ಈ ವಜ್ರ ಸಿಕ್ಕಿದೆ. 50 ವರ್ಷದ ಮೋತಿಲಾಲ್​​ ಗಣಿ ಕೆಲಸವನ್ನು ಲೀಸ್​ಗೆ ತೆಗೆದುಕೊಂಡಿದ್ದರು. ಭೋಪಾಲ್​ನ ಈಶಾನ್ಯ ಪನ್ನಾ ವಜ್ರ ಗಣಿಗಾರಿಕೆ ಪ್ರದೇಶದ 413 ಕಿ.ಮೀ.ಗಳಲ್ಲಿ ಸೆ. 20 ರಂದು ಕೃಷ್ಣ ಕಲ್ಯಾಣಪುರ್​ ಪತ್ತಿ ಗ್ರಾಮದ ಹತ್ತಿರ 25 ಚದರ ಅಡಿಗಳಷ್ಟು ಸ್ಥಳವನ್ನು ಮೋತಿಲಾಲ್​​ ಲೀಸ್​ಗೆ ಪಡೆದುಕೊಂಡಿದ್ದರು. ಆದರೆ, ಇಷ್ಟು ಬೇಗನೇ ಮೋತಿಲಾಲ್​ಗೆ ಲಾಟರಿ ಹೊಡೆದಿದೆ ಎಂದು ಜಿಲ್ಲೆಯ ಗಣಿಗಾರಿಕೆ ಅಧಿಕಾರಿ ಸಂತೋಷ್​​ ಸಿಂಗ್​ ಹೇಳಿದ್ದಾರೆ.

ಇನ್ನು, ವಜ್ರ ಸಿಕ್ಕಿರುವ ಮೋತಿಲಾಲ್​ ಪ್ರಜಾಪತಿ ಇದು ನನ್ನ ಅದೃಷ್ಟ. ನಾನು ನಂಬುವುದಕ್ಕೆ ಅಸಾಧ್ಯವಾಗಿದೆ ಎಂದಿದ್ದಾರೆ. ಮೂರು ತಲೆ ಮಾರುಗಳಿಂದ ಗಣಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ನನ್ನ ತಾತನ ಕಾಲದಿಂದಲೂ ನಾವು ಗಣಿ ಕೆಲಸವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೆವು. ದೇವರ ದಯೆಯಿಂದ ಕೋಟಿ ಮೌಲ್ಯದ ವಜ್ರ ಸಿಕ್ಕಿದೆ. ಇದರಿಂದ ಬಂದ ಹಣವನ್ನು ನಾನು ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಿಸುತ್ತೇನೆ. ತಂದೆ-ತಾಯಿಗಳಿಗೆ ಒಳ್ಳೆಯ ಜೀವನ ರೂಪಿಸುತ್ತೇನೆ. ಮನೆಯ ಸಮಸ್ಯೆ ಇದೆ. ಈ ಹಣದಲ್ಲಿ ಮನೆಯೂ ಕಟ್ಟಿಸಿ, ನನ್ನ ಅಣ್ಣನ ಮಗಳಿಗೆ ಮದುವೆ ಮಾಡಬೇಕು ಎಂದು ಪ್ರಜಾಪತಿ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಜಾಪತಿಗೆ ಸಿಕ್ಕಿರುವ ವಜ್ರ ಅಂದಾಜು 42.59 ಕ್ಯಾರೆಟ್​​ನದ್ದಾಗಿದೆ. ಹರಳುಗಳ ಬಳಕೆಯಲ್ಲಿ ಈ ವಜ್ರವೂ ಎರಡನೇ ದುಬಾರಿ ಮೌಲ್ಯವನ್ನು ಪಡೆದುಕೊಂಡಿದೆ. ಈ ಮೊದಲು ಮಧ್ಯಪ್ರದೇಶದಲ್ಲಿ 1961ರಲ್ಲಿ 44.55 ಕ್ಯಾರಟ್​ನ ವಜ್ರ ಸಿಕ್ಕಿತ್ತು ಎಂದು ಗಣಿ ಅಧಿಕಾರಿ ಸಂತೋಷ್​​ ಹೇಳಿದರು. ಪ್ರಜಾಪತಿ​ಗೆ ಸಿಕ್ಕಿರುವ ವಜ್ರ, ತಜ್ಞರ ಪ್ರಕಾರ ₹ 1.5 ಕೋಟಿಗಿಂತ ಹೆಚ್ಚಿನ ಮೌಲ್ಯ ಹೊಂದಿದೆ. ಈಗ ಈ ವಜ್ರವನ್ನು ಕಲೆಕ್ಟರ್​ ಕಚೇರಿಯಲ್ಲಿ ಠೇವಣಿಯಾಗಿ ಇಡಲಾಗಿದೆ. ನವೆಂಬರ್​​ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಂತರ ವಜ್ರವನ್ನು ಹರಾಜು ಹಾಕಿ, ಬಂದ ಹಣದಲ್ಲಿ 11% ತೆರಿಗೆ ಕಡಿತಗೊಳಿಸಿ ನಂತರ ಮೋತಿಲಾಲ್​ಗೆ ಹಣ ನೀಡಲಾಗುವುದು

ನ್ಯಾಷನಲ್​ ಮಿನರಲ್​ ಡೆವಲಪ್ಮೆಂಟ್​ ಕಾರ್ಪೊರೇಷನ್​ ಲಿಮಿಟೆಡ್​​ ಇಲ್ಲಿ ಗಣಿಗಾರಿಕೆಯನ್ನು ನಿರ್ವಹಿಸುತ್ತದೆ. ಇದು ಕೇಂದ್ರ ಸರ್ಕಾರದ್ದು, ಆದರೆ, ಇಲ್ಲಿನ ರಾಜ್ಯ ಸರ್ಕಾರವೂ ಕಾರ್ಮಿಕ ಕುಟುಂಬಗಳಿಗೆ ಸೇರಿದಂತೆ ಗುತ್ತಿಗೆದಾರರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುತ್ತದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv