ದೇವಸ್ಥಾನದ ಕೆರೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಇಬ್ಬರು ಪದವಿ ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ.

ಕೋಟೇಶ್ವರ ಕಾಗೇರಿ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ, ಸೇನಾಪುರ ನಿವಾಸಿ ಕೀರ್ತನ್(19) ಶವ ಪತ್ತೆಯಾಗಿದ್ದು, ಕಾಳಾವರ ನಿವಾಸಿ ಬಿಕಾಂ ವಿದ್ಯಾರ್ಥಿ ಸಚಿನ್(19) ಶವದ ಹುಡುಕಾಟ ನಡೆಯುತ್ತಿದೆ.

ಇಂದು ಬೆಳಗ್ಗೆ ಕಾಲೇಜಿನಿಂದ ಪರೀಕ್ಷೆಯ ಹಾಲ್ ಟಿಕೆಟ್ ಪಡೆದ ವಿದ್ಯಾರ್ಥಿಗಳು ಸಮೀಪದ ದೇವಸ್ಥಾನದಲ್ಲಿ ಕೆಲ ಹೊತ್ತು ಕಳೆಯಲು ಬಂದಿದ್ದರು. ಸಚಿನ್, ಕೀರ್ತನ್ ಸೇರಿದಂತೆ ಮೂವರು ವಿದ್ಯಾರ್ಥಿಗಳು ದೇವಸ್ಥಾನದ ಕೆರೆಯ ಸಮೀಪ ಬಂದಿದ್ದು, ಈ ವೇಳೆಯಲ್ಲಿ ಸಚಿನ್ ಹಾಗೂ ಕೀರ್ತನ್ ಸ್ನಾನಕ್ಕೆಂದು ಕೆರೆಗೆ ಇಳಿದಿದ್ದರು. ಆದ್ರೆ ಓರ್ವ ವಿದ್ಯಾರ್ಥಿ ಕೆರೆಯ ದಡದಲ್ಲೇ ಕೂತಿದ್ದ. ನೀರಿಗೆ ಇಳಿದವರು ಮೇಲೆ ಬಾರದಿದ್ದನ್ನು ಗಮನಿಸಿದ ವಿದ್ಯಾರ್ಥಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದಾನೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ವಿದ್ಯಾರ್ಥಿಗಳ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದು, ಕೀರ್ತನ್ ಮೃತದೇಹ ಪತ್ತೆಯಾಗಿದೆ. ಸಚಿನ್‌ಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *