‘ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಲು ನನಗೆ ಇಷ್ಟವಿರಲಿಲ್ಲ..!’

ಬೆಂಗಳೂರು: ‘ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಿಎಂ ಆಗಲು ಇಷ್ಟ ಇರಲಿಲ್ಲ. ಅನಿವಾರ್ಯ ಕಾರಣದಿಂದಾಗಿ ನಾನು ರಾಜ್ಯದ ಮುಖ್ಯಮಂತ್ರಿ ಆದೆ’ ಅಂತಾ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್​ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಮೈತ್ರಿಕೂಟ ಸರ್ಕಾರದಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೂ ಸರ್ಕಾರದ ಬಗ್ಗೆ ಸಂಶಯ ವ್ಯಕ್ತಪಡಿಸಿ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಆದ್ಮೇಲೆ ಎಷ್ಟು ದಿನ ಸಿಎಂ ಕುರ್ಚಿಲ್ಲಿ ಇರ್ತೀನಿ ಅಂತಾ ಗೊತ್ತಿಲ್ಲಾ ಅಂತಾ ಈ ಹಿಂದೆ ಅವರೇ ಹೇಳಿದ್ದರು. ಈ ಮಧ್ಯೆ ತಾನು ‘ಸಾಂದರ್ಭಿಕ ಶಿಶು’ ಅಂತಾನೂ ಹೇಳಿದ್ದರು. ಇದೀಗ ‘ನಾನು ಅನಿವಾರ್ಯ ಕಾರಣದಿಂದ ರಾಜ್ಯದ ಸಿಎಂ ಆದೆ’ ಅಂತಾ ಹೆಚ್​ಡಿಕೆ ಹೇಳಿಕೆ ನೀಡಿ, ಸಂಚಲನ ಮೂಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಿಎಂ ಆಗಲು ಇಷ್ಟ ಇರಲಿಲ್ಲ. ನಾನು ಸಿಎಂ ಆಗೋದು ಬೇಡ ಅಂತಾ ದೇವೇಗೌಡರು ಸಹ ಹೇಳಿದ್ದರು. ಕಾಂಗ್ರೆಸ್​ನವರೇ ಯಾರಾದರೂ ಆಗಲಿ ಅಂತಾ ದೇವೇಗೌಡರೂ ಎಂದಿದ್ದರು. ಆದ್ರೆ ದೇವೇಗೌಡರಿಗೆ ಕಾಂಗ್ರೆಸ್​ನ ದೆಹಲಿ ನಾಯಕರು ಫೋನ್ ಕರೆ ಮಾಡಿ, ಹೆಚ್​.ಡಿ.ಕುಮಾರಸ್ವಾಮಿಯೇ ಸಿಎಂ ಆಗಲಿ ಅಂತಾ ಹೇಳಿದರು. ಹಾಗಾಗಿ, ಅನಿವಾರ್ಯ ಸಂದರ್ಭದಲ್ಲಿ ನಾನು ಸಿಎಂ ಆಗಬೇಕಾಯಿತು. ರಾಜ್ಯದಲ್ಲಿ ಭ್ರಷ್ಟಾಚಾರ ನಡೀತಿದೆ. ಒಂದು ವರ್ಗಾವಣೆ ಮಾಡಲು 5 ರಿಂದ 10 ಲಕ್ಷ ಪಡೆಯಲಾಗುತ್ತಿದೆ. ಇದನೆಲ್ಲಾ ನೋಡಿದ್ರೆ ಈ ವ್ಯವಸ್ಥೆಯನ್ನು ಹೇಗೆ ಸರಿ ಮಾಡೋದು ಅಂತಾ ಭಯ ಆಗುತ್ತಿದೆ ಅಂತಾ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv