‘ಸಿಎಂ ಕುಮಾರಸ್ವಾಮಿ ರೈತರಿಗೆ ಟೋಪಿ ಹಾಕಿದ್ದಾರೆ’

ರಾಯಚೂರು: ಸಿಎಂ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರೈತನ್ನು ವಂಚಿಸಿದ್ದಾರೆಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಾಮರಸ ಮಾಲಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಚಾಮರಸ ಮಾಲಿ ಪಾಟೀಲ್​​​, ಕುಮಾರಸ್ವಾಮಿ ಮುಖ್ಯಮಂತ್ರಿ ಆದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆಂದು ಚುನಾವಣಾ ಪೂರ್ವದಲ್ಲಿ ಭರವಸೆ ಕೊಟ್ಟಿದ್ದರು. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿಯೂ ಘೋಷಣೆ ಮಾಡಿಕೊಂಡು ರಾಜ್ಯದ ಉದ್ದಗಲಕ್ಕೆ ಸಂಚರಿಸಿ ಎಲ್ಲಾ ಕಡೆಗಳಲ್ಲಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ ಮುಖ್ಯಮಂತ್ರಿ ಆದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡಲಿಲ್ಲ. ಇದೇ ತಿಂಗಳು 5 ರಂದು 2 ಲಕ್ಷದವರೆಗೆ ಮಾತ್ರ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲ ಮನ್ನಾದಲ್ಲಿಯೂ ಹಲವಾರು ಷರತ್ತುಗಳನ್ನು ಹಾಕಿದ್ದಾರೆ. ಇದು ರೈತ ಸಮುದಾಯಕ್ಕೆ ಪ್ರಯೋಜನವಾಗಿಲ್ಲ. ಕೊಟ್ಟ ಮಾತಿನಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡದೇ ಕುಮಾರಸ್ವಾಮಿ ರೈತರಿಗೆ ಟೋಪಿ ಹಾಕಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರೈತರಿಗಷ್ಟೇ ಅಲ್ಲದೇ ಗರ್ಭಿಣಿಯರಿಗೆ ಹಾಗೂ ವಯೋವೃದ್ಧರಿಗೆ ನೀಡಿದ್ದ ಭರವಸೆಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸದೇ ಅವರಿಗೆ ವಂಚಿಸಿ ಮಾತು ತಪ್ಪಿದ್ದಾರೆಂದು ಆರೋಪಿಸಿದರು. ಕೊಟ್ಟ ಮಾತಿಗೆ ತಪ್ಪಿರುವ ಸಿಎಂ ಕುಮಾರಸ್ವಾಮಿ ಅವರ ನೀತಿಯನ್ನು ಖಂಡಿಸಿ, ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಇದೇ ತಿಂಗಳು 21 ರಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಸ್ವರಾಜ್ ಇಂಡಿಯಾ ಪಾರ್ಟಿ ಸೇರಿ ಹಲವು ರೈತಪರ ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಿವೆ ಎಂದ ಅವರು ಬಳ್ಳಾರಿ ಜಿಲ್ಲೆ ಹೊಸಪೇಟೆ ಬಳಿಯ ಹಿಟ್ನಾಳ್ ಕ್ರಾಸ್​​ನಲ್ಲಿ ಸಾವಿರಾರು ರೈತರು ಸೇರಿಕೊಂಡು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv