ಫ್ಲೈ ಬಸ್ ಪ್ರಯಾಣಿಕರು ಇನ್ಮುಂದೆ ಸೇಫ್​: ಕೆಎಸ್​​ಆರ್​​ಟಿಸಿಯಿಂದ ಹೊಸ ಪ್ರಯೋಗ

ಬೆಂಗಳೂರು: ಫ್ಲೈ ಬಸ್ ಪ್ರಯಾಣಿಕರಿಗೆ ಕೆಎಸ್​​ಆರ್​​ಟಿಸಿ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದೆ. ದೇವನಹಳ್ಳಿ ಇಂಟರ್​ನ್ಯಾಷನಲ್ ಏರ್​​ಪೋಟ್​​ನಿಂದ​ ಮೈಸೂರು ಮಾರ್ಗವಾಗಿ ಮಡಿಕೇರಿಗೆ ಹೊರಡುವ ಕೆಎಸ್​​ಆರ್​​ಟಿಸಿ ಫ್ಲೈ ಬಸ್ ಪ್ರಯಾಣಿಕರು ಪ್ರತಿನಿತ್ಯ, ಬಸ್ ಒಳಗಿನ ಕೆಟ್ಟ ವಾಸನೆ, ಬ್ಯಾಕ್ಟೀರಿಯಾ ವೈರಾಣು ಜೊತೆಗೆ ಇನ್ಫೆಕ್ಷನ್​ ಗಳಿಂದಾಗಿ ಸಾಕಷ್ಟು ಸಮಸ್ಯೆಗಳನ್ನ ಅನುಭವಿಸುವಂತಾಗಿತ್ತು.

ಇದು ಪ್ರಯಾಣಿಕರಿಗಲ್ಲದೇ ಕೆಸ್​ಆರ್​ಟಿಸಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದ್ರೀಗ ಬಸ್ ಒಳಗಿನ ಕೆಟ್ಟ ವಾಸನೆ, ಕಣ್ಣಿಗೆ ಕಾಣದಿರುವ ಸೂಕ್ಷ್ಮ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳನ್ನು ಕೊಲ್ಲುವ ಸಲುವಾಗಿ ಕೆಸ್​ಆರ್​ಟಿಸಿ ಒಂದು ವಿನೂತನ ಪ್ರಯೋಗ ಮಾಡ್ತಿದೆ. ಆ್ಯಂಟಿ ಬ್ಯಾಕ್ಟೀರಿಯಲ್ ಫಮೆಗೇಷನ್ ಅನ್ನುವ ಹೊಸ ಪ್ರಯೋಗದ ಮೂಲಕ ಫ್ಲೈ ಬಸ್​ಗಳನ್ನ ಬ್ಯಾಕ್ಟಿರಿಯಾ ಫ್ರೀ ಬಸ್​ಗಳನ್ನಾಗಿಸಲು ಮುಂದಾಗಿದೆ.

ಅಂದ್ರೆ, ಬಸ್​ನಲ್ಲಿ ಬ್ಯಾಕ್ಟಾಕ್ಲೀನ್ ಎನ್ನುವ ಮಿಷನ್ ಇಟ್ಟು ಅದರಲ್ಲಿ ಅಲ್ಟ್ರಾಮಿಸ್ಟ್ ಕ್ಲೀನರ್ ಎನ್ನುವ ಆರ್ಗ್ಯಾನಿಕ್ ಲಿಕ್ವಿಡ್​ ಬಳಸಿ, ಆ ಮಿಷನ್​ನಲ್ಲಿ ಸ್ಮೋಕ್​ ಬರಿಸಲಾಗುತ್ತೆ. ಈ ಸ್ಮೋಕ್ ಬರಿಸುವ ಕಾಲಕ್ಕೆ 15 ರಿಂದ 20 ನಿಮಿಷಗಳ ವರೆಗೆ ಬಸ್ಅ​ನ್ನು ಸಂಪೂರ್ಣವಾಗಿ ಕ್ಲೂಸ್​ ಮಾಡಲಾಗುತ್ತದೆ. ಈ ಸ್ಮೋಕ್​ ಬಸ್​ ತುಂಬ ಹರಡಿಕೊಂಡು ಬಸ್​​ನಲ್ಲಿರುವ ಕೆಟ್ಟ ವಾಸನೆ, ಬ್ಯಾಕ್ಟೀರಿಯಾ, ವೈರಾಣು ಹಾಗೂ ಸೂಕ್ಷ್ಮವಾದ ಕೀಟಾಣುಗಳನ್ನು ಹೋಗಲಾಡಿಸಲು ಸಹಾಯವಾಗುತ್ತದೆ. ಈ ರೀತಿಯಾದ ಫಮೆಗೇಷನ್​ ಪ್ರಯೋಗವನ್ನ ಒಂದು ಸಲ ಮಾಡಿದ್ರೆ, ಅದು 2 ತಿಂಗಳವರೆಗೆ ಬಸ್​ನಲ್ಲಿರುವ ಬ್ಯಾಕ್ಟಿರಿಯಾ ವೈರಾಣುಗಳ ತಡೆಗಟ್ಟುವುದರ ಜೊತೆಗೆ, ಕೆಟ್ಟ ವಾಸನೆಯನ್ನೂ ತಡೆಗಟ್ಟುತ್ತೆ.

ಕೆಮ್ಮು, ನೆಗಡಿನೂ ಬರಂಗಿಲ್ಲ
ವಿಶೇಷ ಅಂದ್ರೆ, ಬಸ್​ನಲ್ಲಿ ಪ್ರಯಾಣಿಸುವಾಗ ನಿಮ್ಮ ಅಕ್ಕಪಕ್ಕದಲ್ಲಿ ಕೂತಿರುವ ಪ್ರಯಾಣಿಕರಿಗೆ ಕೆಮ್ಮು, ನೆಗಡಿ, ಜ್ವರದಂತಹ ಅಂಟು ರೋಗಗಳಿದ್ರೆ, ಆ ರೋಗ ಇನ್ನೊಬ್ಬರಿಗೆ ಹರಡದಂತೆ ಈ ಫಮೆಗೇಷನ್ ತಡೆಯುತ್ತೆ. ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಕೆಎಸ್​​ಆರ್​​ಟಿಸಿ ಮೊದಲ ಬಾರಿಗೆ ಈ ಹೊಸ ಪ್ರಯೋಗವನ್ನು ಕೈಗೆತ್ತಿಕೊಂಡಿದೆ. ಇದೇ ಡಿಸೆಂಬರ್ 17 ರಂದು ಈ ಪ್ರಯೋಗವನ್ನು ಬೆಂಗಳೂರಿನಿಂದ ಮೈಸೂರು, ಮಡಿಕೇರಿಗೆ ಹೋಗುವ ಬಸ್​ವೊಂದರಲ್ಲಿ ಮಾಡಲಾಗಿದೆ. ಇದಕ್ಕೆ ಪ್ರಯಾಣಿಕರ ಫೀಡ್ ಬ್ಯಾಕ್ ಕೂಡ ತೆಗೆದುಕೊಳ್ಳುತ್ತಿರುವ ಅಧಿಕಾರಿಗಳು, ಈ ಫಮೆಗೇಷನ್ ಪ್ರಯೋಗ ಯಶಸ್ವಿಯಾಗಿದ್ದೇ ಆದ್ರೆ, ಮುಂದಿನ ದಿನಗಳಲ್ಲಿ ಎಲ್ಲ ಕೆಎಸ್​​ಆರ್​​ಟಿಸಿ ಫ್ಲೈ ಬಸ್​ಗಳಿಗೂ ಈ ಫಮೆಗೇಷನ್ ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ವರದಿ: ಮಾರುತೇಶ್​.ಪಿ.ಎಲ್​​​

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv