32 ಪ್ರಯಾಣಿಕರ ಪ್ರಾಣ ಉಳಿಸಿದ ಕೆಎಸ್​ಆರ್​ಟಿಸಿ ಡ್ರೈವರ್

ಬೆಂಗಳೂರು: ಬೆಂಗಳೂರಿನಿಂದ ಹೈದರಾಬಾದ್​​ಗೆ ತೆರಳುತ್ತಿದ್ದ ಕೆಎಸ್ಆರ್​ಟಿಸಿ ಐರಾವತ ಬಸ್​ವೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಡೆದಿದೆ. ಇಷ್ಟಾದ್ರೂ ಚಾಲಕನ ಜಾಗರೂಕತೆಯಿಂದ ಭಾರಿ ಅನಾಹುತ ತಪ್ಪಿದೆ. ಪ್ರಯಾಣಿಕರು ಯಾವುದೇ ತೊಂದರೆಗೊಳಗಾಗದೆ ಬಚಾವ್​ ಆಗಿದ್ದಾರೆ. ದೇವನಹಳ್ಳಿಯ ರಾಣಿಕ್ರಾಸ್ ಬಳಿ ಐರಾವತ ಬಸ್​ ಇಂಜಿನ್​ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಬಸ್ಸಿನ ತುಂಬಾ ದಟ್ಟ ಹೊಗೆ ಆವರಿಸಿತ್ತು. ಕೂಡಲೆ ಬಸ್ಸನ್ನು ಸೈಡಿಗೆ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ ಚಾಲಕ, ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. 32 ಜನ ಪ್ರಯಾಣಿಕರನ್ನು KA-57-F-212 ಸಂಖ್ಯೆಯ ಐರಾವತ ಬಸ್ ಕೊಂಡೊಯ್ಯುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.