ಪೆಟ್ರೋಲ್‌ ಬಂಕ್‌ಗೆ ನುಗ್ಗಿತು ಕೆಎಸ್‌ಆರ್‌ಟಿಸಿ ಬಸ್‌: ತಪ್ಪಿತು ಭಾರೀ ಅನಾಹುತ!

ಬೆಂಗಳೂರು: ಬ್ರೇಕ್​ ಫೇಲ್ ಆದ ಕೆಎಸ್​ಆರ್​ಟಿಸಿ ಬಸ್ಸೊಂದು ಪೆಟ್ರೋಲ್ ಬಂಕ್ ಒಳಗೆ ನುಗ್ಗಿದ ಘಟನೆ ಬೆಂಗಳೂರಿನ ಗೊರಗುಂಟೆ ಪಾಳ್ಯದಲ್ಲಿ ನಡೆದಿದೆ. ಇಂದು ಬೆಳಗ್ಗೆ ಹಾಸನದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌, ಹೆಚ್‌ಪಿ ಗೌತಮ್ ಪೆಟ್ರೋಲ್‌ ಬಂಕ್‌ ಒಳಗೆ ನುಗ್ಗಿದೆ. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ.

 

 

ಹಾಸನದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನ ಬ್ರೇಕ್ ಫೇಲ್ಯೂರ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ಟೇರಿಂಗ್ ಲಾಕ್ ಆಗಿದೆ. ಈ ಕಾರಣದಿಂದ ನಿಯಂತ್ರಣ ತಪ್ಪಿದ ಬಸ್​, ಪೆಟ್ರೋಲ್ ಬಂಕ್ ಒಳಗೆ ನುಗ್ಗಿದೆ. ಗೊರಗುಂಟೆಪಾಳ್ಯದ ಸಿಗ್ನಲ್ ದಾಟಿದ ನಂತರ ಬ್ರೇಕ್ ವೈಫಲ್ಯ ಆಗಿದೆ ಎನ್ನಲಾಗಿದೆ. ಯಾವುದೇ ಅನಾಹುತವಾಗದಿರಲಿ ಎಂದು ಬಸ್​ ಚಾಲಕ ಪೆಟ್ರೋಲ್ ಬಂಕ್ ಒಳಗೆ ಬಸ್‌ ನುಗ್ಗಿಸಿದ್ದಾನೆ ಎಂದು ತಿಳಿದು ಬಂದಿದೆ. ಬಸ್‌ನಲ್ಲಿ ಒಟ್ಟು ಹನ್ನೊಂದು ಜನ ಪ್ರಯಾಣಿಕರಿದ್ದರು.
ಬಸ್‌ ಡಿಕ್ಕಿಯಿಂದ ಪೆಟ್ರೋಲ್ ಬಂಕ್​ನ ಕ್ಯಾಬಿನ್, ಪೈಪ್ ಲೈನ್, ಕಾಂಪೌಂಡ್ ಗೋಡೆ ಮತ್ತು ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಈ ಘಟನೆಯಿಂದ ನಮಗೆ 15ಲಕ್ಷ ನಷ್ಟವಾಗಿದೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ನಷ್ಟ ತುಂಬಿ ಕೊಡಬೇಕೆಂದು ಆಗ್ರಹಿಸಿದ್ದಾರೆ. ಆರ್​ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv