ಜವಾಬ್ದಾರಿಯನ್ನು ಬಹಳ ಎಚ್ಚರಿಕೆಯಿಂದ ಸ್ವೀಕರಿಸಿದ್ದೇನೆ: ಕೃಷ್ಣ ಬೈರೇಗೌಡ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಐತಿಹಾಸಿಕ ಖಾತೆ. ನನ್ನ ಅರ್ಹತೆ ಮತ್ತು ಅನುಭವದಲ್ಲಿ ಹಿಂದೆ ನಿರ್ವಹಿಸಿರುವವರಿಗಿಂತ ನಾನೇ ಕಡಿಮೆ ಇದ್ದೇನೆ. ಈವರೆಗೆ ಈ ಇಲಾಖೆಯನ್ನು ಒಬ್ಬರಿಗಿಂತ ಒಬ್ಬರು ದಿಗ್ಗಜರೇ ನಿರ್ವಹಿಸಿದ್ದಾರೆ. ಹೀಗಾಗಿ ಜವಾಬ್ದಾರಿಯನ್ನು ಬಹಳ ಎಚ್ಚರಿಕೆಯಿಂದ ಸ್ವೀಕಾರ ಮಾಡಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಇಂದು  ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಐದು ವರ್ಷ ಜಟಿಲವಾದ ಕೃಷಿ ಖಾತೆಯನ್ನು ನಿರ್ವಹಿಸಿದ್ದೇನೆ. ಸವಾಲುಗಳು ಇರುವ ಖಾತೆಯಲ್ಲಿ ನಾನು ಆತ್ಮನಿಷ್ಠೆಯಿಂದ ಕೆಲಸ ಮಾಡುತ್ತೇನೆ. ಇಲಾಖೆಯ ಪರಿಚಯ ಮತ್ತು ಪರಿಶೀಲನೆಗೆ ಐದು ದಿನ ಮೀಸಲಿಟ್ಟಿದ್ದೇನೆ ಎಂದು ಹೇಳಿದರು.

ಇನ್ನು, ಕುಡಿಯುವ ನೀರನ್ನು ಸಮರ್ಪಕವಾಗಿ ನೀಡುವ ಬಗ್ಗೆ ಮಾತನಾಡಿದ ಅವರು, ಕೇಂದ್ರದಿಂದ ನಾವು ಕೇಳಿದಷ್ಟು ಅನುದಾನ ಬಂದಿಲ್ಲ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಈ ಹಿಂದೆ ಉದ್ಯೋಗ ಖಾತ್ರಿಯಲ್ಲಿ ಕೇಂದ್ರ ಸರ್ಕಾರ ಹಣ ಪಾವತಿ ಮಾಡದ ಕಾರಣ ರಾಜ್ಯ ಸರ್ಕಾರವೇ ಭರಿಸಿತ್ತು. ಅದರ ಬಾಕಿ 1050 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಕೊಟ್ಟಿಲ್ಲ. ನಾವು ಅಧಿಕೃತ ಲೆಕ್ಕ ಕೊಟ್ಟಿದ್ದೇವೆ. ಅಮಿತ್ ಷಾ ರೀತಿ ನಾವು ಬರೆದುಕೊಂಡು ಬಂದು ಲೆಕ್ಕ ಹೇಳುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv