‘ಬಿಎಸ್​ವೈ ಹವಾಲಾ ಹಣ ಬಳಸಿ ಸರ್ಕಾರ ಬೀಳಿಸಲು ಹೊರಟಿದ್ದಾರೆ’

ಬೆಂಗಳೂರು: ಪಕ್ಷದ ಯಾವ ಶಾಸಕರೂ ಪಕ್ಷ ಬಿಡುವ ಮಾತನ್ನಾಡಿಲ್ಲ ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನಮ್ಮ ಶಾಸಕರು ಪಕ್ಷ ಬಿಡುತ್ತಾರೆ ಅನ್ನೋ ಮಾತುಗಳು ಸತ್ಯಕ್ಕೆ ದೂರವಾಗಿವೆ. ಶಾಸಕ ಸುಧಾಕರ್, ಎಂಟಿಬಿ ನಾಗರಾಜ್ ಸೇರಿದಂತೆ ಯಾವುದೇ ಶಾಸಕರು ಪಕ್ಷ ಬಿಡಲ್ಲ. ಖಾಸಗಿ ಕಾರ್ಯಕ್ರಮ ನಿಮಿತ್ತ ಕೆಲ ಶಾಸಕರು ಮುಂಬಯಿಗೆ ತೆರಳಿರಬಹುದು. ಆದರೆ ಅದನ್ನು ಪಕ್ಷ ವಿರೋಧ ಯತ್ನ ಅಂತಾ ಯಾರೂ ಹೇಳಬಾರದು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸರ್ಕಾರ ಕೆಡವಲು ಯತ್ನಿಸುತ್ತಿದ್ದಾರೆ. ಅವರ ಆಪರೇಷನ್ ಕಮಲ ನೋಡಿದ್ದೇವೆ. ಈಗಲೂ ಹವಾಲಾ ಹಣ ಬಳಸಿ ಸರ್ಕಾರ ಕೆಡವಲು ಯತ್ನಿಸುತ್ತಿದ್ದಾರೆ. ಅವರ ಯತ್ನಕ್ಕೆ ಕೆಲ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರೆ ಕ್ರಮ
ನಮ್ಮ ಶಾಸಕರು ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಹೇಳಿಕೆ ನೀಡಬಾರದು. ಹಾಗೊಂದು ವೇಳೆ ನೀಡಿದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಅಗಸ್ಟ್ 3ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇನ್ನೆರಡು ದಿನದಲ್ಲಿ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನ ಪ್ರಕಟಿಸುತ್ತೇವೆ. ಅಕ್ಟೋಬರ್‌ ಮೊದಲ ವಾರ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿದರು.

ಸಿಎಂ ಉದ್ದೇಶಪೂರ್ವಕವಾಗಿ ಹೇಳಿಲ್ಲ
‘ಹೆಚ್.ಡಿ.ಕುಮಾರಸ್ವಾಮಿ ದಂಗೆ’ ಹೇಳಿಕೆಗೆ ಪ್ರತಿಕ್ರಿಯಿಸಿ ಸಿಎಂ ಕುಮಾರಸ್ವಾಮಿ ದಂಗೆ ಎಬ್ಬಿಸುತ್ತೇನೆ ಎಂದು ಕೋಪದಲ್ಲಿ ಹೇಳಿರಬಹುದು. ಉದ್ದೇಶ ಪೂರ್ವಕವಾಗಿ ಹೇಳಿರಲು ಸಾಧ್ಯವಿಲ್ಲ. ಭಾವನಾತ್ಮಕವಾಗಿ ಹಾಗೆ ಮಾತನ್ನಾಡಿದ್ದಾರೆ ಅಷ್ಟೇ. ಇದನ್ನು ಬೆಳೆಸುವುದು ಸರಿಯಲ್ಲ. ಸಿಎಂಗೆ ಎಲ್ಲ ಕಡೆಯಿಂದ ತೊಂದರೆ ನೀಡಲಾಗ್ತಿದೆ. ಪ್ರತಿದಿನ ಸರ್ಕಾರ ಬೀಳಿಸುವ ಯತ್ನ ನಡೆಯುತ್ತಿದೆ. ಒಂದು ಕಡೆ ಪ್ರತಿ ಪಕ್ಷ, ಇನ್ನೊಂದು ಕಡೆ ಸರ್ಕಾರ ಬೀಳುತ್ತದೆ ಎಂಬ ಸುದ್ದಿಯಿಂದ ಬೇಸತ್ತು ಸಿಎಂ ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡಿರಬಹುದು ಅಂತಾ ಹೇಳಿದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv