ಯಾರಿಗೆ ಒಲಿಯಲಿದೆ ಕೆಪಿಸಿಸಿ ಅಧ್ಯಕ್ಷ ಪಟ್ಟ..?

ಬೆಂಗಳೂರು: ಸಚಿವ ಸಂಪುಟ ರಚನೆಗೆ 12 ದಿನ ತೆಗೆದುಕೊಂಡು ಲಿಸ್ಟ್ ಫೈನಲ್ ಮಾಡಿದರು ಕಾಂಗ್ರೆಸ್‌ ಪಕ್ಷ ನೆಮ್ಮದಿಯಾಗಿ ನಿಟ್ಟುಸಿರು ಬಿಡುವಂತಿಲ್ಲ. ಯಾಕಂದ್ರೆ, ಕಾಂಗ್ರೆಸ್‌ಗೆ ಈಗ ಕೆಪಿಸಿಸಿಯ ಸಾರಥಿ ಆಯ್ಕೆಯ ಕಗ್ಗಂಟು ಎದುರಾಗಿದೆ. ಕಳೆದ ಏಳೂವರೆ ವರ್ಷದಿಂದ ಕೆಪಿಸಿಸಿ ಸಾರಥ್ಯವಹಿಸಿದ್ದ ಡಾ.ಜಿ.ಪರಮೇಶ್ವರ್‌ ಈಗ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಒನ್‌ ಮ್ಯಾನ್ ಒನ್ ಪೋಸ್ಟ್‌ ರೂಲ್ಸ್‌ನಡಿ ಕೆಪಿಸಿಸಿಗೆ ಮತ್ತೊರ್ವ ನಾಯಕನನ್ನ ಆಯ್ಕೆ ಮಾಡುವ ಅನಿವಾರ್ಯತೆ ಕಾಂಗ್ರೆಸ್‌ಗೆ ಎದುರಾಗಿದೆ. ಈ ನಡುವೆ ಕೆಪಿಸಿಸಿ ಸಾರಥಿಯಾಗಲು ಹಿರಿಯ ನಾಯಕರು ಅದಾಗಲೇ ಟವಲ್ ಹಾಕಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಎಂ.ಬಿ.ಪಾಟೀಲ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಫಸ್ಟ್​ನ್ಯೂಸ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ನಿನ್ನೆ ಸಚಿವರ ಪಟ್ಟಿ ಅಂತಿಮಗೊಳಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ತುಟ್ಟಿ ಬಿಚ್ಚಿಲ್ಲ. ಮೂವರು ರೇಸ್​​ನಲ್ಲಿದ್ದು, ಇದರ ಬಗ್ಗೆಯೂ ಪರಮೇಶ್ವರ್ ರಾಹುಲ್​​ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಪ್ರಬಲ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್, ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್ ಮತ್ತು ಈಡಿಗ ಸಮುದಾಯಕ್ಕೆ ಸೇರಿದ ಬಿ.ಕೆ.ಹರಿಪ್ರಸಾದ್ ಅಧ್ಯಕ್ಷ ಗಾದಿ ಅಲಂಕರಿಸಲು ಉತ್ಸುಕರಾಗಿದ್ದಾರೆ. ಆದ್ರೆ, ಈ ಮೂವರಲ್ಲಿ ಕೆಪಿಸಿಸಿ ಅಧ್ಯಕ್ಷ ಗಿರಿ ಯಾರಿಗೆ ಒಲಿಯಲಿದೆ ಅನ್ನೋ ಕುತೂಹಲಕ್ಕೆ ಸದ್ಯವೇ ತೆರೆ ಬೀಳಲಿದೆ. ಆದ್ರೆ, ಈ ಆಯ್ಕೆಯೂ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗುವುದರಲ್ಲಿ ಅನುಮಾನವಿಲ್ಲ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv