ಕಂಗೊಳಿಸ್ತಿದೆ ಏಳು ಸುತ್ತಿನ ಕೋಟೆ.. ಕಣ್ತುಂಬಿಕೊಳ್ಳೋಣ ಬನ್ನಿ.

ಚಿತ್ರದುರ್ಗ: ಚಿತ್ರದುರ್ಗ ಅಂದಾಕ್ಷಣ ನೆನಪಾಗೋದೇ ಏಳುಸುತ್ತಿನ ಕೋಟೆ. ಅಂಥ ಕೋಟೆ ಈಗ ಮೊದಲ ಮಳೆಗೆ ಮೈಯೊಡ್ಡಿ ನವ ವಧುವಿನಂತೆ ಕಂಗೊಳಿಸುತ್ತಿದೆ. ಹೀಗಾಗಿ ಹಿಂದೆಂದಿಗಿಂತ ಹೆಚ್ಚಿನ ಪ್ರವಾಸಿಗರು ಕೋಟೆ ವೀಕ್ಷಣೆಗೆ ಧಾವಿಸುತ್ತಿದ್ದಾರೆ.ಚಿತ್ರದುರ್ಗ ನಗರದ ಏಳುಸುತ್ತಿನ ಕೋಟೆ. ವೀರ ಮದಕರಿ ನಾಯಕರಾಳಿದ ಕೋಟೆ. ವೀರ ವನಿತೆ ಒನಕೆ ಓಬವ್ವ ಶೌರ್ಯ ಮೆರೆದ ಕಲ್ಲಿನ ಕೋಟೆ. ಈ ಐತಿಹಾಸಿಕ ಕೋಟೆ ನೋಡಲೆರಡು ಕಣ್ಣು ಸಾಲದು. ಕೋಟೆ ಪ್ರವೇಶದ್ವಾರದಲ್ಲಿರುವ ನಾಗರಹಾವಿನ ಲಾಂಛನ, ಬೃಹತ್ ಸುಂದರ ಕಲ್ಲುಗಳ ಕಲ್ಲಿನ ಗೋಡೆಗಳ ಸಾಲು. ಮದ್ದು ಬಿಸುವ ಕಲ್ಲು, ತುಗುಯ್ಯಾಲೆ ಕಂಬ, ಗಾಳಿ ಗೋಪುರ, ಒಂಟಿ ಕಲ್ಲು ಬಸವಣ್ಣ, ಹಳೇ ಮುರುಘಾಮಠ ಹಾಗೂ ಹಿಡಂಬೇಶ್ವರ, ಏಕನಾಥೇಶ್ವರಿ ದೇಗುಲ, ಜಲಪಾತ್ರೆಗಳು ಹಾಗೂ ಒನಕೆ ಓಬವ್ವನ ಕಿಂಡಿ ಹೀಗೆ ಸಾಲು ಸಾಲು ಐತಿಹಾಸಿಕ ಸ್ಮಾರಕಗಳು ಕೋಟೆಯಲ್ಲಿ ಕಣ್ಮನ ತಣಿಸುತ್ತವೆ. ನಾಲ್ಕಾರು ವರ್ಷಗಳ ಕಾಲ ಬರದಿಂದ ಬಸವಳಿದಿದ್ದ ಕೋಟೆನಾಡಿಗೆ ಈ ವರ್ಷದ ಮೊದಲ ಮಳೆ ಚನ್ನಾಗಿಯೇ ಬಂದಿದೆ. ಹೀಗಾಗಿ, ಕೋಟೆಯೂ ಅಲ್ಲಲ್ಲಿ ಹಸಿರು ಹೊದ್ದು ಮತ್ತಷ್ಟು ಕಂಗೊಳಿಸುತ್ತಿದ್ದು ಪ್ರವಾಸಿಗರನ್ನು ಬರ ಸೆಳೆಯುತ್ತಿದೆ. ಪರಿಣಾಮ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೋಟೆ ವೀಕ್ಷಕರ ಸಂಖೆ ದ್ವಿಗುಣಗೊಂಡಿದೆ.
ಕೋಟೆಗೆ ಹಿಂದೆಂದಿಗಿಂತಲೂ ಈ ತಿಂಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸುಂದರ ಪರಿಸರದ ಕೋಟೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಪೂರ್ವ ವಲಯ ಐಜಿಪಿ ಶರತ್ ಚಂದ್ರ ಅವರೂ ಸಹ ಕೋಟೆಗೆ ಆಗಮಿಸಿ ಐತಿಹಾಸಿಕ ಕೋಟೆ ವೀಕ್ಷಿಸಿದರು. ಐಜಿಪಿ ಅವರೇ ಬಂದಿದ್ದಾರೆ ಅಂದ್ಮೇಲೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳೂ ಸಹ ಕೋಟೆಯಲ್ಲೊಂದು ಸುತ್ತು ಹಾಕಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv