ಕೋಟಕ್ ಮಹೀಂದ್ರಾ ಬ್ಯಾಂಕ್ ನೌಕರರಿಂದ ಪ್ರತಿಭಟನೆ

ಹುಬ್ಬಳ್ಳಿ: ಕೋಟಕ್ ಮಹೀಂದ್ರಾ ಬ್ಯಾಂಕ್ ಆಡಳಿತ ಮಂಡಳಿಯವರು ನೌಕರರ ಸಂಘದೊಂದಿಗೆ ಮಾಡಿಕೊಂಡ ಒಪ್ಪಂದಗಳಿಗೆ ವ್ಯತಿರಿಕ್ತವಾಗಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಹುಬ್ಬಳ್ಳಿಯಲ್ಲಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದ್ದಾರೆ. ನಗರದ ನೆಹರು ಗ್ರೌಂಡ್ ಬಳಿ ಇರುವ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸಂಗೊಳ್ಳಿ ರಾಯಣ್ಣ ವೃತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ, ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನ್ಯಸಂಕ್ ಆಡಳಿತ ಮಂಡಳಿ ನೌಕರರ ಸಮಸ್ಯೆಗಳನ್ನು, ಬೇಡಿಕೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಅಲ್ಲದೇ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಆಡಳಿತ ವರ್ಗವು ಐ.ಎನ್.ಜಿ ವೈಶ್ಯಾ ಬ್ಯಾಂಕನ್ನು ವಿಲೀನ ಮಾಡಿಕೊಳ್ಳುವಾಗ ಐ.ಎನ್.ಜಿ ವೈಶ್ಯ ಬ್ಯಾಂಕ್ ನೌಕರರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೇ ಯಾವುದೇ ಒಪ್ಪಂದಕ್ಕೆ ಪೂರಕವಾದ ಬೆಂಬಲ ನೀಡದೇ ಕಾರ್ಮಿಕ ವಿರೋಧಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ನೌಕರರ ಯಾವುದೇ ತಪ್ಪು ಇಲ್ಲದಿದ್ದರೂ, ಒಂದಲ್ಲ ಒಂದು ನೆಪವೊಡ್ಡಿ ಅವರನ್ನ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಬ್ಯಾಂಕ್‌ ನಲ್ಲಿ ನೌಕರರು ಕೆಲಸ ಮಾಡವ ಸ್ಥಳದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದರು. ಅಲ್ಲದೇ ಶೀಘ್ರವಾಗಿ ನೌಕರರ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.