ಕೊಪ್ಪಳದ ಸರ್ಕಾರಿ ಶಾಲೆಗಳಿಗೇಕೆ ಇಂಥ ದುಸ್ಥಿತಿ..?

ಕೊಪ್ಪಳ: ಸರ್ಕಾರಿ ಶಾಲೆಗಳು ಉಳಿಯಬೇಕು. ಅವು ಅಭಿವೃದ್ಧಿಯಾಗಬೇಕು. ಜೊತೆಗೆ ಕನ್ನಡ ಶಾಲೆಗಳ ಉಳಿವಿಗಾಗಿ ಎಲ್ರೂ ಶ್ರಮಿಸಬೇಕು ಅಂತ ರಾಜ್ಯ ಸರ್ಕಾರ ಚುಕ್ಕಾಣಿ ಹಿಡಿದ ಪ್ರತಿಯೊಬ್ಬ ಜನಪ್ರತಿನಿಧಿ ಹೇಳುವ ಮಾತಿದು. ಆದ್ರೆ, ಕೊಪ್ಪಳದ ಕೆಲ ಶಾಲೆಗಳ‌ ಸ್ಥಿತಿ ನೋಡಿದ್ರೆ, ಸರ್ಕಾರದಿಂದ ಜಾರಿಯಾದ ಯೋಜನೆಗಳು ಎಲ್ಲಿ ಹೋಗುತ್ತಿವೆ? ಅನ್ನೋ ಪ್ರಶ್ನೆ ಉದ್ಭವಿಸದೇ ಇರದು. ಹೌದು! ಸರ್ಕಾರಿ ಶಾಲೆಯಲ್ಲಿ ಜೀವ ಭಯದಲ್ಲಿ ಮಕ್ಕಳು ಪಾಠ ಕೇಳಬೇಕಾದ ಪರಿಸ್ಥಿತಿ ಮಕ್ಕಳದ್ದು. ಇನ್ನು ಇವರಿಗೆ ಪಾಠ ಮಾಡುವ ಶಿಕ್ಷಕರ ಸ್ಥಿತಿ ಏನೂ ಬೇರೆ ಇಲ್ಲ. ಕೆಲ ಶಾಲೆಗಳು ಶಿಥಿಲ ವ್ಯವಸ್ಥೆಗೆ ತಲುಪಿದರೂ, ಅವುಗಳನ್ನು ದುರಸ್ಥಿ ಅಥವಾ ಸ್ಥಳಾಂತರಿಸುವ ಕೆಲಸವಾಗುತ್ತಿಲ್ಲ. ಅಷ್ಟೊಂದು ಬೇಜವಾಬ್ದಾರಿತನವನ್ನು ಇಲ್ಲಿನ ಶಿಕ್ಷಣ ಇಲಾಖೆ ಅಧಿಕಾರಿಗಳು ತೋರಿದ್ದಾರೆ.
ಶಾಲೆಗಳಲ್ಲಿ ಮಕ್ಕಳು ಪಾಠ ಕೇಳುತ್ತಿರುವಾಗ ಯಾವಾಗ ಏನಾಗಬಹುದೋ ಎನ್ನುವ ಆತಂಕ ಪಾಲಕರದ್ದು. ಶಿಥಿಲದಿಂದ ಕುಸಿಯುವ ಸ್ಥಿತಿಯಲ್ಲಿರುವ ಶಾಲಾ ಮೇಲ್ಛಾವಣೆಗಳು. ಹೊರಗೆ ಚಾಚಿಕೊಂಡಿರುವ ಕಬ್ಬಿಣದ ರಾಡ್​ಗಳು. ಮಳೆ ಬಂದ್ರೆ ಮೋರಿ ನೀರು ಶಾಲೆಗೆ ನುಗ್ಗಿ ಬರುವಂತ ಸ್ಥಿತಿಯಲ್ಲಿರುವ ಶಾಲೆಗಳಿವೆ. ಇಂತಹ ಶಾಲೆಗಳಲ್ಲಿ, ಕೊಪ್ಪಳದ ಹೃದಯಭಾಗದಲ್ಲಿರೋ ಕೇಂದ್ರೀಯ ಮಾದರಿ ಶಾಲೆ ಕೂಡ ಒಂದು. ಸರ್ಕಾರಿ ಕೇಂದ್ರ ಮಾದರಿಯ ಶಾಲೆಯ ಕಟ್ಟಡಕ್ಕೆ ಐವತ್ತು ವರ್ಷ ಸಂದಿವೆ. ಹಾಗಾಗಿ ಕಟ್ಟಡ ಶಿಥಿಲಾವಸ್ಥೆಗೆ ಬಂದಿದೆ. ನಿರಂತರವಾಗಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿಯುತ್ತಲೇ ಇದೆ. ಕಬ್ಬಿಣದ ರಾಡ್​​ಗಳು ಹೊರ ಕಾಣುತ್ತಿವೆ. ಹಲವು ಬಾರಿ ದೊಡ್ಡ ಅನಾಹುತಗಳಿಂದ ತಪ್ಪಿದ ಉದಾಹರಣೆಗಳೂ ಇವೆ ಅಂತ ಇಲ್ಲಿನ ಶಿಕ್ಷಕರು, ಶಾಲಾ ಮಕ್ಕಳು ಹೇಳುತ್ತಾರೆ.
ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿರುವ ಸರ್ಕಾರಿ ಶಾಲೆ ಇದಾಗಿದೆ. ಈ ಶಾಲೆಯಲ್ಲಿ ಒಟ್ಟು 488 ವಿದ್ಯಾರ್ಥಿಗಳು 1 ರಿಂದ 8 ನೇ ತರಗತಿಯವರಿಗೆ ಓದುತ್ತಿದ್ದಾರೆ. ಶಾಲಾ ಕಟ್ಟಡದ ಶಿಥಿಲಾವಸ್ಥೆ ಕುರಿತು ಶಾಲೆಯ ಮುಖ್ಯಗುರುಗಳು, ಪಾಲಕರು ಹಲವು ಬಾರಿ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದ್ರು ಪ್ರಯೋಜನವಾಗಿಲ್ಲ. ಸರ್ಕಾರಿ ಶಾಲೆಗಳ ದುರಸ್ತಿಗೆ ಕೋಟ್ಯಂತರ ಹಣ ಬಂದ್ರೂ ಅಧಿಕಾರಿಗಳು ಮಾತ್ರ ಯೋಜನೆ ರೂಪಿಸಿ ಸುಮ್ಮನಾಗುತ್ತಾರೆ. ಕೊಪ್ಪಳದಲ್ಲಿ ನಾಲ್ಕು ತಾಲೂಕುಗಳಲ್ಲಿ ಸರ್ಕಾರಿ ಪ್ರಾಥಾಮಿಕ ಶಾಲೆಗಳು 386, ಸಮಾಜ ಕಲ್ಯಾಣ ಇಲಾಖೆಯ 3 ಶಾಲೆಗಳು, ಅನುದಾನಿತ 2 ಮತ್ತು ಅನುದಾನರಹಿತ 158 ಸೇರಿ ಒಟ್ಟು 549 ಶಾಲೆಗಳಿವೆ. ಹಿರಿಯ ಪ್ರಾಥಮಿಕ ಶಾಲೆಗಳು 576, ಸಮಾಜಕಲ್ಯಾಣ ಇಲಾಖೆಯ 38 ಶಾಲೆಗಳು, ಅನುದಾನಿತ 27 ಅನುದಾನರಹಿತ 161 ಒಟ್ಟು 803 ಶಾಲೆಗಳಿವೆ. ಇದರಲ್ಲಿ ಸುಮಾರು 49 ಶಾಲೆಗಳಲ್ಲಿ ಕೊಠಡಿ, ಬಾಲಕರ/ ಬಾಲಕಿಯರ ಶೌಚಾಲಯ ಮತ್ತು ಶಿಥಿಲ ವ್ಯವಸ್ಥೆ ಇಲ್ಲದ ಸ್ಥಿತಿಯಲ್ಲಿವೆ. ಅದರಲ್ಲಿ ಕೊಪ್ಪಳದ ಕೇಂದ್ರಿಯ ಮಾದರಿ ಶಾಲೆ ಕೂಡ ಒಂದು. ಇಷ್ಟೆಲ್ಲಾ ಶಾಲೆಗಳಲ್ಲಿ ಸಮಸ್ಯೆಗಳಿದ್ರೂ ಮೇಲಾಧಿಕಾರಿಗಳು ಮಾತ್ರ ತಮಗೇನು ಸಂಬಂಧವಿಲ್ಲದಂತೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಒಟ್ಟಿನಲ್ಲಿ ಜಿಲ್ಲಾ ಕೇಂದ್ರದ ಹೃದಯಭಾಗದಲ್ಲಿರುವ ಕೇಂದ್ರಿಯ ಮಾದರಿ ಶಾಲೆಯ ಸ್ಥಿತಿಯನ್ನು ನೋಡಿದರೆ ಹಳ್ಳಿಗಳಲ್ಲಿರುವ ಸರಕಾರಿ ಶಾಲೆಗಳ ಬಗ್ಗೆ ಯೋಚಿಸುವಂತ ಸ್ಥಿತಿ ಎದುರಾಗಿದೆ. ಸರಕಾರಿ ಶಾಲೆ ಅಂದ್ರೆ ಮುಗು ಮುರಿಯುವ ಈ ಕಾಲದಲ್ಲಿ ಶಾಲೆಗಳು ಇಂತಹ ಸ್ಥಿತಿಗೆ ತಲುಪಿದರೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಉಳಿಯುತ್ತವೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಕ್ತಕ್ರಮ ಕೈಗೊಳ್ಳಬೇಕಾಗಿರುವುದು. ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv