ಕೊಲ್ಲೂರು ಮೂಕಾಂಬಿಕೆ ಗರ್ಭಗುಡಿಗೆ ಆ ಮಹಿಳೆ ಕರೆದೊಯ್ದಿದ್ದಕ್ಕೆ ಭುಗಿಲೆದ್ದಿತ್ತು ವಿವಾದ

ಕೊಲ್ಲೂರು ದೇವಾಲಯದ ಗರ್ಭಗುಡಿಗೆ ಕಳೆದ ಮಂಗಳವಾರ ಮಹಿಳೆಯೊಬ್ಬರು ಪ್ರವೇಶ ಮಾಡಿದ್ದರು. ಇದೀಗ ಸಮಾಜಿಕ ಜಾಲತಾಣಗಳಲ್ಲಿ ಗರ್ಭಗುಡಿ ಪ್ರವೇಶ ಮಾಡಿರುವ  ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುವುದರ ಜೊತೆಗೆ ತೀವ್ರ ಚರ್ಚೆಗೂ ಗ್ರಾಸವಾಗಿದೆ. ಕೆಲವರು ಆ ಮಹಿಳೆ ಮುಕಾಂಬಿಕೆಯ ಗರ್ಭಗುಡಿಯೊಳಗೆ ಪ್ರವೇಶ ಮಾಡುವ ಮೂಲಕ ನಂಬಿಕೆಗೆ ಅಪಚಾರ ಮಾಡಲಾಗಿದೆ ಅಂತಾ ಆರೋಪಿಸುತ್ತಿದ್ದಾರೆ. ಇನ್ನೂ ಕೆಲವರು ಮಹಿಳೆಯರು ದೇವರ ಗರ್ಭಗುಡಿಯೊಳಗೆ ಪ್ರವೇಶ ಮಾಡಿದ್ರೆ ತಪ್ಪೇನಿದೆ? ಅನ್ನೋ ಪ್ರಶ್ನೆಯನ್ನ ಎತ್ತಿದ್ದಾರೆ.

ಕೆಲವರ ಪ್ರಕಾರ, ನೂರಾರು ವರ್ಷಗಳ ಇತಿಹಾಸವಿರುವ ಕೊಲ್ಲೂರು ದೇವಾಲಯದ ತಾಯಿ ಮೂಕಾಂಬಿಕೆಗೆ ಅಪಾರ ಶಕ್ತಿಯಿದೆ. ತಾಯಿ ಬಳಿ ಹೋದರೆ ಸಕಲ ಕಷ್ಟಗಳು ಪರಿಹಾರವಾಗುತ್ತೆ ಅನ್ನೋ ನಂಬಿಕೆ ಇದೆ. ಹೀಗಿರುವಾಗ ದೇವಾಲಯದಲ್ಲಿ ಯಾವುದೇ ಅಪಚಾರಗಳು ಆಗದಂತೆ ಎಚ್ಚರವಹಿಸುವ ಕೆಲಸವೂ ನಡೆಯುತ್ತಾ ಬಂದಿದೆ. ಅದರಂತೆ ದೇವಾಲಯದ ಗರ್ಭಗುಡಿಯೊಳಗೆ ಮಹಿಳೆಯರಿಗೆ ಪ್ರವೇಶಕ್ಕೆ ಕೊಲ್ಲೂರಿನಲ್ಲೂ ನಿರ್ಬಂಧಿಸಲಾಗಿದೆ. ಆದ್ರೀಗ ಆ ದೇವಾಲಯದಲ್ಲಿ ತಾಯಿ ಮೂಕಾಂಬಿಕೆಗೆ ಪೂಜೆ ಸಲ್ಲಿಸುವ ಪ್ರಧಾನ ಅರ್ಚಕರ ಸಹಾಯದಿಂದಲೇ ಮಹಿಳೆಯೊಬ್ಬರು ಗರ್ಭಗುಡಿಯೊಳಗೆ ಪ್ರವೇಶ ಮಾಡಿರೋದು ಎಷ್ಟು ಸರಿ? ಎಲ್ಲವನ್ನೂ ತಿಳಿದ ಅರ್ಚಕರೇ ಮಹಿಳೆಗೆ ಗರ್ಭಗುಡಿಯೊಳಗೆ ಪ್ರವೇಶ ಮಾಡಿ ಕೊಡುವ ಮೂಲಕ ಅಪಚಾರ ಮಾಡಲಾಗಿದೆ ಅನ್ನೋ ಆರೋಪ ಬಲವಾಗಿ ಕೇಳಿ ಬಂದಿದೆ.

ಗರ್ಭಗುಡಿ ಪ್ರವೇಶ ಮಾಡಿದ್ದ ಮಹಿಳೆ ಯಾರು..?

ಅಷ್ಟಕ್ಕೂ ಕೊಲ್ಲೂರು ಮೂಕಾಂಬಿಕೆಯ ದೇವಾಲಯವನ್ನು ಪ್ರವೇಶಿಸಿದ್ದು ಉಮಾ ಅನ್ನೋ ಮಹಿಳೆ. ಇವರು ಈ ಹಿಂದೆ ಕೊಲ್ಲೂರು ಮೂಕಾಂಬಿಕೆಯ ದೇವಾಲಯದಲ್ಲಿ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರಂತೆ. ಅಂದು ಅಧಿಕಾರಿದಲ್ಲಿದ್ದ ಉಮಾ, ರಾಮಚಂದ್ರ ಅಡಿಗ ಅನ್ನೋರಿಗೆ ಅರ್ಚಕರ ಹುದ್ದೆಯಿಂದ ಪ್ರಧಾನ ಆರ್ಚಕರ ಹುದ್ದೆಗೆ ಬಡ್ತಿ ಸಿಗುವ ಹಾಗೇ ಮಾಡಿದ್ರಂತೆ. ಅಂದಿನಿಂದ ರಾಮಚಂದ್ರ ಅಡಿಗರೇ ಕೊಲ್ಲೂರು ಮೂಕಾಂಬಿಕೆ ದೇವಿಯ ಪ್ರಧಾನ ಆರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಉಮಾ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ವರ್ಗಾವಣೆಗೊಂಡು, ಬೆಂಗಳೂರಿನ ಬನಶಂಕರಿ ದೇವಾಲಯಕ್ಕೆ ಬಂದು ಸೇವೆ ಸಲ್ಲಿಸಿದ್ದಾರೆ. ಇಂದು ಉಮಾ ನಿವೃತ್ತರಾಗಿದ್ದು, ಕೊಲ್ಲೂರು ಮೂಕಾಂಬಿಕೆ, ಬನಶಂಕರಿ ಸೇರಿದಂತೆ ಅನೇಕ ದೇವಾಲಯಗಳ ಒಡನಾಟವನ್ನಿಟ್ಟುಕೊಂಡಿದ್ದಾರೆ. ಅದರಂತೆ ಉಮಾ ಮೊನ್ನೆ ಮುಕಾಂಬಿಕೆ ಸನ್ನಿಧಿಗೆ ಭೇಟಿ ನೀಡಿ, ಗರ್ಭಗುಡಿಗೆ ಪ್ರವೇಶ ಮಾಡಿದ್ದಾರೆ ಅನ್ನೋ ಮಾತುಗಳೂ ಕೇಳಿ ಬಂದಿವೆ.

ಅಂದು ಉಮಾ ಅವರು ಅರ್ಚಕರಾಗಿದ್ದ ರಾಮಚಂದ್ರ ಅಡಿಗರನ್ನು ಪ್ರಧಾನ ಅರ್ಚಕರಾಗಲು ಮಾಡಿದ ಸಹಾಯವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಅಡಿಗರು, ಮೊನ್ನೆ ದಸರಾ ಆಚರಣೆಯ ಹಿನ್ನೆಲೆಯಲ್ಲಿ, ಉಮಾ ಅವರನ್ನು ಕೊಲ್ಲೂರು ದೇವಾಲಯಕ್ಕೆ ಆಹ್ವಾನಿಸಿ, ಯಾರೂ ಇಲ್ಲದ ಸಂದರ್ಭದಲ್ಲಿ ನೋಡಿ, ನೇರವಾಗಿ ಗರ್ಭಗುಡಿ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಾರೆ ಅನೋ ಮಾತು ಕೂಡ ಕೇಳಿ ಬಂದಿದೆ.

ಗರ್ಭಗುಡಿಗೆ ಮಹಿಳೆಯರ ಪ್ರವೇಶ ನಿಷಿದ್ಧ ಏಕೆ…?

ಸಂಪ್ರದಾಯದ ಪ್ರಕಾರ, ಮಹಿಳೆಯರು ಗರ್ಭಗುಡಿಯನ್ನು ಸಲೀಸಾಗಿ ಪ್ರವೇಶಿಸುವಂತಿಲ್ಲ. ಯಾವುದೇ ದೇವಾಲಯವಾಗಲೀ, ಮಹಿಳೆಯರಿಗೆಂದು ಕೆಲ ನಿಯಮಗಳು ಇವೆ. ಅದನ್ನು ಮೀರಿ ಮೊನ್ನೆ ಉಮಾ, ಕೊಲ್ಲೂರು ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿದ್ದಾರೆ. ದೇವಾಲಯಗಳ ಪ್ರಾಂಗಣ, ಜೊತೆಗೆ ಹೊರ ಅಂಗಳಗಳಲ್ಲಿ ಮಹಿಳೆಯರಿಗೆ ಪ್ರವೇಶ ಇರುವುದು ಸಾಮಾನ್ಯ. ಆದ್ರೆ ಗರ್ಭಗುಡಿಯೊಳಗೆ ಅಷ್ಟೊಂದು ಸುಲಭವಾಗಿ ಮಹಿಳೆಯರನ್ನು ಬಿಡುವುದಿಲ್ಲ. ಇದಕ್ಕೆ ಕಾರಣ ಕೂಡ ಇದೆ. ದೇವಾಲಯಗಳಲ್ಲಿ ಶುದ್ಧ ಪುಣ್ಯಾರ್ಚನೆ ನಡೆದಿರುತ್ತೆ. ಜೊತೆಗೆ ದಿಗ್ಭಂದನಗಳು ಸೇರಿದಂತೆ ಅಷ್ಟಮಂಗಲ ಪ್ರಶ್ನೆ ಹಾಕುವ ಸ್ಥಳಗಳೂ ಇವೆ. ಹೀಗಾಗಿ ಮಹಿಳೆಯರಿಗೆ ದೇವಾಲಯಗಳಲ್ಲಿ ಒಂದು ಹಂತದವರೆಗೂ ಪ್ರವೇಶ ಕಲ್ಪಿಸಿ, ಗರ್ಭಗುಡಿ ಸೇರಿದಂತೆ ಕೆಲ ಸ್ಥಳಗಳಲ್ಲಿ ನಿಷಿದ್ಧ ಹೇರಲಾಗಿದೆ.

ಮೊನ್ನೆ ನಡೆದ ಅಪಚಾರವಾದ್ರೂ ಏನು…?
ಮೊನ್ನೆ ನಿವೃತ್ತ ಮಹಿಳಾ ಅಧಿಕಾರಿ ಉಮಾ ಅವರು ನೇರವಾಗಿ ದೇವಾಲಯದ ಗರ್ಭಗುಡಿ ಪ್ರವೇಶಿಸಿದ್ದಾರೆ. ದಸರಾದ ನವರಾತ್ರಿ ಸಂದರ್ಭದಲ್ಲಿ ಮಾತ್ರ 9 ಮಂದಿ ಮುತ್ತೈದೆಯರನ್ನು ನವದುರ್ಗಿಯರೆಂದು ಪರಿಗಣಿಸಿ, ಕೊಲ್ಲೂರಿನ ಮೂಕಾಂಬಿಕಾ ದೇವಾಲಯದಲ್ಲಿರುವ ಲಕ್ಷ್ಮೀ ಮಂಟಪಕ್ಕೆ ಆಹ್ವಾನಿಸಲಾಗುತ್ತೆ. ಲಕ್ಷ್ಮೀ ಮಂಟಪದಲ್ಲಿ 9 ಮಂದಿ ಮುತ್ತೈದೆಯರನ್ನು ನವದುರ್ಗಿಯರು ಎಂದು ಪೂಜಿಸಿ, ಅವರಿಂದ ದೇವಿಗೆ ದೂರದಿಂದಲೇ ಪೂಜೆಯನ್ನು ಮಾಡುವಂತೆ ಸೂಚಿಸಿ, ದೇವಾಲಯದ ಆಡಳಿತ ಮಂಡಳಿಯಿಂದ ಮುತ್ತೈದೆಯರಿಗೆ ಬಾಗೀನ ಅರ್ಪಿಸಲಾಗುತ್ತೆ. ಇದು ಕೂಡ ದೇವಾಲಯದ ಆಡಳಿತ ಮಂಡಳಿಯ ಅನುಮತಿ ಮೇರೆಗೆ ಮಾಡುವ ಕಾರ್ಯ. ಇದನ್ನು ಹೊರತುಪಡಿಸಿದ್ರೆ, ಬೇರೆ ಯಾವ ಸಂದರ್ಭದಲ್ಲೂ ಮಹಿಳೆಯರಿಗೆ ಅಷ್ಟೊಂದು ಸುಲಭವಾಗಿ ದೇವಾಲಯದ ಗರ್ಭಗುಡಿಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.

ಕೇವಲ ದಸರಾ ಆಚರಣೆಯ ನವರಾತ್ರಿಗಳಲ್ಲಿ ಆಡಳಿತ ಮಂಡಳಿ ಸೂಚಿಸುವ ಮುತ್ತೈದೆಯರಿಗೆ ಮಾತ್ರ ಅವಕಾಶವಿದ್ದು, ಆರ್ಚಕರಾದ ರಾಮಚಂದ್ರ ಅಡಿಗರು ಮಾಡಿರುವ ಯಡವಟ್ಟು ಈಗ ಚರ್ಚೆಗೆ ಗ್ರಾಸವಾಗಿದೆ. ನವರಾತ್ರಿ ಸಂದರ್ಭದಲ್ಲಿ ಹೀಗಾಗಿರುವುದರಿಂದ ಪ್ರಶ್ನೆ ಚಿಂತನೆ ನಡೆಯಬೇಕೆಂದು ಅರ್ಚಕರು ಗುಂಪೊಂದು ಹಕ್ಕೋತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಕೊಲ್ಲೂರು ಮೂಕಾಂಬಿಕೆಗೆ ಅಪಚಾರವಾಗಿದೆ ಎಂಬುದನ್ನು ಅರಿತಿರುವ ದೇವಾಲಯದ ಆಡಳಿತ ಮಂಡಳಿ ಮುಂದೇನು ಮಾಡುತ್ತೆ ಎಂಬುದು ಕುತೂಹಲ ಕೆರಳಿಸಿದೆ.