ಚಿಟ್ ಫಂಡ್ ಕೇಸ್​​: ಇಂದು ಸಿಬಿಐನಿಂದ ರಾಜೀವ್ ಕುಮಾರ್​ ವಿಚಾರಣೆ

ಕೋಲ್ಕತ್ತಾ : ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಪಟ್ಟಂತೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಸಿಬಿಐ ಇಂದು ಶಿಲ್ಲಾಂಗ್‌ನಲ್ಲಿ ವಿಚಾರಣೆ ನಡೆಸಲಿದೆ. ವಿಚಾರಣೆ ಸಂಬಂಧ ಆಯುಕ್ತರು ಈಗಾಗಲೇ ಶಿಲ್ಲಾಂಗ್‌ಗೆ ತಲುಪಿದ್ದಾರೆ.

ಪ್ರಕರಣದಲ್ಲಿ ಆಯುಕ್ತ ರಾಜೀವ್‌ ಕುಮಾರ್‌ ಅವರನ್ನ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇವತ್ತು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಿರುವ ಆರೋಪ ರಾಜೀವ್ ಕುಮಾರ್ ಅವರ ಮೇಲಿದೆ. ಮೂಲಗಳ ಪ್ರಕಾರ, ಪೊಲೀಸ್ ಆಯುಕ್ತ ರಾಜೀವ್ ಅವ್ರನ್ನ ಮೊದಲು ಸಿಬಿಐ ಕಾರ್ಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತದೆ. ಬಳಿಕ ಅಜ್ಞಾತ ಸ್ಥಳದಲ್ಲಿ ಸಿಬಿಐ ವಿಚಾರಣೆ ನಡೆಸಲಿದೆ ಎಂದು ತಿಳಿದು ಬಂದಿದೆ. ಆಯುಕ್ತರ ಜೊತೆಗೆ ಮೂವರು ಐಪಿಎಸ್ ಅಧಿಕಾರಿಗಳು ಸಹ ಇರಲಿದ್ದಾರೆ. ಇಂದು ದೆಹಲಿಯಿಂದ ಸಿಬಿಐನ ಮತ್ತೊಂದು ತಂಡ ಸಂಜೆ ಶಿಲ್ಲಾಂಗ್‌ಗೆ ಆಗಮಿಸಲಿದೆ.

ಚಿಟ್ ಫಂಡ್ ಹಗರಣ ಸಂಬಂಧ ರಾಜೀವ್‌ಕುಮಾರ್ ಅವರನ್ನು ವಿಚಾರಣೆ ನಡೆಸಲು ಹೋದ ಸಿಬಿಐ ಅಧಿಕಾರಿಗಳನ್ನೇ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು. ಬಳಿಕ ಸಿಬಿಐ, ಸುಪ್ರಿಂ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​​, ಸಿಬಿಐ ವಿಚಾರಣೆಗೆ ಸಹಕಾರ ನೀಡುವಂತೆ ಹಾಗೂ ವಿಚಾರಣೆಗೆ ಹಾಜರಾಗುವಂತೆ ರಾಜೀವ್​ ಕುಮಾರ್​ ಅವರಿಗೆ ಸೂಚನೆ ನೀಡಿತ್ತು. ಆದ್ರೆ ಯಾವುದೇ ಕಾರಣಕ್ಕೂ ಅವರನ್ನು ಬಂಧಿಸಕೂಡದು ಎಂದು ಸುಪ್ರಿಂ ತ್ರಿಸದಸ್ಯ ಪೀಠ ಸಿಬಿಐಗೆ ಆದೇಶ ನೀಡಿತ್ತು.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv