KMF ಚರ್ಚೆ: ಮಾಧುಸ್ವಾಮಿ ಆರೋಪ, ಸಿದ್ದು ಉತ್ತರ, ರೇವಣ್ಣ ಸಮರ್ಥನೆ

ಬೆಂಗಳೂರು: ಕೆಎಂಎಫ್ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ವಿಧಾನಸಭಾ ಕಲಾಪದಲ್ಲಿ ಬಿಜೆಪಿ ಶಾಸಕ ಮಾಧುಸ್ವಾಮಿ ಆರೋಪ ಮಾಡಿದ್ದಾರೆ. ವಾರ್ಷಿಕ 96 ಲಕ್ಷ ರೂಪಾಯಿ ವೇತನ ನೀಡಿ ಕನ್ಸಲ್ಟೆಂಟ್ ನೇಮಕ ಮಾಡಿಕೊಳ್ಳಲಾಗಿದೆ. ಅದರಲ್ಲೂ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೊತ್ಸಾಹ ಧನ ಘೋಷಿಸಿದ ನಂತರ ಕೆಎಂಎಫ್​ನಲ್ಲಿ ಸರಿಯಾದ ಲೆಕ್ಕಾಚಾರ ಇಲ್ಲ. ಸರ್ಕಾರದ ಸಬ್ಸಿಡಿ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಮಾತನಾಡಲು ಮುಂದಾದರು. ಆಗ ಶಾಸಕ ಸೋಮಶೇಖರ ರೆಡ್ಡಿ  ಮಾತನಾಡಿ, ಕೆಎಂಎಫ್​​ನ ಹಾಲು ಉತ್ಪಾದಕರ ಸಬ್ಸಿಡಿ ಹಣ ದುರುಪಯೋಗವಾಗಿಲ್ಲ. ಮಧ್ಯವರ್ತಿಗಳ ಪಾಲಾಗಿಲ್ಲ. ಸಬ್ಸಿಡಿ ಹಣ ನೇರವಾಗಿ ಹಾಲು ಉತ್ಪಾದಕರ ಅಕೌಂಟ್​ಗೆ ಹೋಗುತ್ತಿದೆ ಎಂದರು. ಆಗ ರೈತರಿಗೆ ಕೊಡುತ್ತಿರುವ ಹಣವನ್ನು ಸಬ್ಸಿಡಿ ಎಂದು ಬಳಸಬೇಡಿ. ಅದನ್ನು ಪ್ರೋತ್ಸಾಹ ಧನ ಎಂದೇ ಪರಿಗಣಿಸಬೇಕು ಅಂತಾ ಸ್ಪೀಕರ್ ರಮೇಶ್ ಕುಮಾರ್ ಸಲಹೆ ನೀಡಿದರು.

‘ಕೆಎಂಎಫ್​​ನಲ್ಲಿ ಎಲ್ಲವೂ ಸರಿಯಿಲ್ಲ’

ಬಳಿಕ ಸಿದ್ದರಾಮಯ್ಯ ಮಾತನಾಡಿ, ಹಾಲು ಉತ್ಪಾದಕರಿಗೆ ಕೊಡುತ್ತಿರುವ ಐದು ರೂಪಾಯಿ ಸಬ್ಸಿಡಿಯಲ್ಲ. ಅದು ಪ್ರೋತ್ಸಾಹ ಧನ. ಇದರಿಂದ ಹಾಲು ಉತ್ಪಾದನೆ ಪ್ರಮಾಣ 75 ಲಕ್ಷ ಲೀಟರ್​​ಗೆ ಹೆಚ್ಚಳವಾಗುತ್ತದೆ. ರೈತರ ಉತ್ಪಾದನೆಗೆ ಸರಿಯಾದ ದರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹಾಗೆಂದು ಕೆಎಂಎಫ್​​ನಲ್ಲಿ ಎಲ್ಲವೂ ಸರಿಯಿಲ್ಲ, ನಷ್ಟದಲ್ಲಿದೆ. ಕೆಎಂಎಫ್​ ಸರಿದೂಗಿಸಲು ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ನಾಲ್ಕು ದಿನ ಉಚಿತ ಹಾಲು ವಿತರಣೆ ಯೋಜನೆ ಆರಂಭಿಸಲಾಯ್ತು ಅಂತಾ ಸಿದ್ದರಾಮಯ್ಯ ಹೇಳಿದರು.

ರೇವಣ್ಣ ಸಮರ್ಥನೆ

ಮಾಧುಸ್ವಾಮಿ ಆರೋಪಕ್ಕೆ ಸಚಿವ ಹೆಚ್​​.ಡಿ.ರೇವಣ್ಣ ಸಮರ್ಥನೆ ಮಾಡಿಕೊಂಡರು. ಕೆಲವು ಹಾಲು ಉತ್ಪಾದಕರ ಸಂಘಗಳಲ್ಲಿ ಸದಸ್ಯರೇ ರೈತರ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಪ್ರೋತ್ಸಾಹ ಧನ ಕಬಳಿಸುತ್ತಿರೋದು ನಿಜ. ಇದನ್ನು ತಪ್ಪಿಸಿ ನೈಜ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದ ಹೆಚ್.ಡಿ.ರೇವಣ್ಣ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಲವು ಬೆಳೆಗಳಿಗೆ ಬೆಂಬಲ‌ ಬೆಲೆ ಹೆಚ್ಚಳ ಮಾಡಿದ್ದಾರೆ‌. ಅದಕ್ಕೆ ಪೂರಕವಾಗಿ ಸರ್ಕಾರ ಖರೀದಿ ಕೇಂದ್ರಗಳು ಹಾಗೂ ಬೆಳೆ ಸಂರಕ್ಷಣೆಗೆ ಗೋದಾಮುಗಳ ವ್ಯವಸ್ಥೆ ಮಾಡಬೇಕು. 500 ಕೋಟಿ ರೂ.ಗಳ ಆವರ್ತನಿಧಿ ಇಡಬೇಕು. ಇದರಿಂದ ಕೇಂದ್ರ ಸರ್ಕಾರದ ಹಣ ಬರುವುದು ವಿಳಂಬವಾದ್ರೂ ರೈತರಿಗೆ ಬೆಂಬಲ ಬೆಲೆ ವಿತರಣೆಗೆ ಅನುಕೂಲವಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಬಿಎಸ್​​ ಯಡಿಯೂರಪ್ಪ ಸಲಹೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv