ತುಮಕೂರಿನವರಿಗೇಕೆ ಬೆಂಗಳೂರು ಉಸ್ತುವಾರಿ: ಡಿಸಿಎಂ ವಿರುದ್ಧ ಜಾರ್ಜ್‌ ಗರಂ..!

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ ಸಂಬಂಧ ಉಂಟಾಗಿರುವ ಅಸಮಾಧಾನ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣ ಕಾಣ್ತಿಲ್ಲ. ಇದೀಗ ಡಿಸಿಎಂ ಡಾ.ಜಿ.ಪರಮೇಶ್ವರ್ ವಿರುದ್ಧ ಸಚಿವ ಕೆ.ಜೆ.ಜಾರ್ಜ್​ ಮುನಿಸಿಕೊಂಡಿದ್ದಾರೆ. ಜಿ.ಪರಮೇಶ್ವರ್, ಡಿಸಿಎಂ, ಗೃಹ ಖಾತೆ, ಬೆಂಗಳೂರು ನಗರಾಭಿವೃದ್ಧಿ ಖಾತೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ನಿಭಾಯಿಸುತ್ತಿದ್ದಾರೆ. ಇದು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ.

ಪರಮೇಶ್ವರ್ ವಿರುದ್ಧ ಜಾರ್ಚ್​ ಮುನಿಸಿಗೆ ಕಾರಣವೇನು?
ಕೆ.ಜೆ.ಜಾರ್ಚ್​ ಪ್ರತಿನಿಧಿಸುವುದು ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ. ಡಾ.ಜಿ.ಪರಮೇಶ್ವರ್ ಆಯ್ಕೆಯಾಗಿರುವುದು ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರ. ಈಗಾಗಲೇ ಇಬ್ಬರಿಗೂ ಕಾಂಗ್ರೆಸ್ ಹೈಕಮಾಂಡ್ ತಮ್ಮದೇ ಆದ ರೀತಿಯಲ್ಲಿ ಪಕ್ಷದಲ್ಲಿ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಕೊಟ್ಟಿದ್ದಾಗಿದೆ. ಆದ್ರೂ ಜಾರ್ಚ್​ ಪರಮೇಶ್ವರ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ  ಕೆ.ಜೆ.ಜಾರ್ಜ್​, ಜಿ.ಪರಮೇಶ್ವರ್ ಮೂರ್ನಾಲ್ಕು ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಅವರೇ ಉಪಮುಖ್ಯಮಂತ್ರಿ, ಅವರೇ‌ ಕೆಪಿಸಿಸಿ ಅಧ್ಯಕ್ಷರು, ಜೊತೆಗೆ ಅವರೇ ಗೃಹ ಸಚಿವರು. ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಬೇರೆ? ಅವರು ಆಯ್ಕೆಯಾಗಿರುವುದು ಎಲ್ಲಿಂದ? ಅವರು ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಶಾಸಕರಾಗಿರುವುದು. ತುಮಕೂರಿನ ಕೊರಟಗೆರೆ ಎಲ್ಲಿದೆ? ಅವರು ತುಮಕೂರು ಜಿಲ್ಲೆಗೆ ಅಲ್ವಾ, ಉಸ್ತುವಾರಿ ಆಗಬೇಕಾಗಿರುವುದು?  ಇಲ್ಲಿಗೆ ಹೇಗೆ ಆಗುವುದಕ್ಕೆ ಆಗುತ್ತೆ? ಬೆಂಗಳೂರಿನಲ್ಲಿ ನಾನು, ಜಮೀರ್, ಕೃಷ್ಣಬೈರೇಗೌಡ ಮೂವರು ಸಚಿವರಿದ್ದೇವೆ. ಈಗ ನಮ್ಮನ್ನ ಯಾವ ಜಿಲ್ಲೆಗೆ ಉಸ್ತುವಾರಿ ಮಾಡ್ತಾರೆ? ಕಳೆದ ಸಂಪುಟದಲ್ಲಿ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಬಿಡಿಎ, ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿ-ಟ್ರ್ಯಾಕ್ ಗಳಲ್ಲಿ ನಾನು ಉತ್ತಮ ಸಾಧನೆ ಮಾಡಿದ್ದೇನೆ. ಹೀಗಿರುವಾಗ ನನಗೆ ಯಾಕೆ ಬೆಂಗಳೂರು ನಗರಾಭಿವೃದ್ಧಿ ಕೊಟ್ಟಿಲ್ವೋ ಅರ್ಥವಾಗುತ್ತಿಲ್ಲ. ನಾನು ಇದರ ಬಗ್ಗೆ ಖಂಡಿತಾ ಹೈಕಮಾಂಡ್ ಗಮನ ಸೆಳೆಯುತ್ತೇನೆ ಎಂದು ಕೆ.ಜೆ.ಜಾರ್ಚ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಬರಹ: ಪಿ.ಮಧುಸೂದನ್

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv